ಋತುಚಕ್ರ ಮಹಿಳೆಯ ಜೀವನದ ಅವಿಭಾಜ್ಯ ಅಂಗ. ಆದರೂ ಕೂಡ ಮಹಿಳೆಯೂ ಸೇರಿದಂತೆ ಎಲ್ಲರೂ ಈ ವಿಷಯವನ್ನು ಮುಕ್ತವಾಗಿ ಚರ್ಚಿಸಲು ಹಿಂಜರಿಯುತ್ತಾರೆ. ಅಷ್ಟೇ ಅಲ್ಲದೇ, ಈ ಸಮಯದಲ್ಲಿ ಅನೇಕ ಕಟ್ಟುಪಾಡುಗಳಿಗೆ ಮಹಿಳೆ ಗುರಿಯಾಗುತ್ತಾಳೆ. ಋತುಚಕ್ರದ ಸಂದರ್ಭದಲ್ಲಿ ಮಹಿಳೆ ಅಶುದ್ದಳು ಎಂಬ ಪರಿಕಲ್ಪನೆ ಇಂದಿಗೂ ಇದೆ. ಇದೇ ಕಾರಣದಿಂದ ಆಕೆಗೆ ಈ ಸಮಯದಲ್ಲಿ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಈ ದಿನಗಳಲ್ಲಿ ಅಡುಗೆ ಮನೆ, ದೇಗುಲ, ವ್ಯಾಯಾಮ, ಹಾಸಿಗೆ ಮೇಲೆ ಮಲಗುವುದೂ ಸೇರಿದಂತೆ ಕೆಲವು ವಿಚಾರಗಳಿಂದ ಆಕೆಯನ್ನು ದೂರವಿಡಲಾಗುತ್ತದೆ.
ವೈದ್ಯರು ಮತ್ತು ತಜ್ಞರು ಹೇಳುವ ಪ್ರಕಾರ, ಇವೆಲ್ಲ ಋತುಚಕ್ರದ ಬಗೆಗಿರುವ ತಪ್ಪು ಕಲ್ಪನೆಗಳು. ಆದರೆ, ವಾಸ್ತವವೇ ಬೇರೆ. ಋತುಚಕ್ರಮದಲ್ಲಿ ಆಕೆ ಅನುಭವಿಸುವ ನೋವು ಕಡಿಮೆ ಮಾಡಲು ಈ ನಿರ್ಬಂಧಗಳು ಆಕೆಗೆ ಸಹಾಯ ಮಾಡಬಹುದಷ್ಟೇ. ಮಹಿಳಾ ದಿನಾಚರಣೆಯ ಈ ಹೊತ್ತಿನಲ್ಲಿ ಮುಟ್ಟಿನ ಬಗ್ಗೆ ಹೊಂದಿರುವ ತಪ್ಪು ಪರಿಕಲ್ಪನೆ ಮತ್ತು ಮೂಢನಂಬಿಕೆಗಳ ಕುರಿತು ಉತ್ತಮ ಮಾಹಿತಿ ಹೊಂದುವುದರೊಂದಿಗೆ ಸಮಾಜದ ಚಿಂತನಾ ಶೈಲಿಯನ್ನು ಬದಲಾಯಿಸಬೇಕಿದೆ. ಈ ಕುರಿತು ನವದೆಹಲಿಯ ಸ್ತ್ರೀ ರೋಗ ತಜ್ಞೆ ಡಾ.ಅಂಜನಾ ಸಿಂಗ್ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಋತುಚಕ್ರ ಎಂದರೇನು?: ಪ್ರತೀ ತಿಂಗಳು ಮಹಿಳೆಯ ಹಾರ್ಮೋನ್ಗಳಿಂದ ಗರ್ಭಕೋಶದಲ್ಲಿ ಒಳ ಪದರ ಉತ್ಪತ್ತಿಯಾಗುತ್ತದೆ. ಆಕೆ ಸಂತಾನೋತ್ಪತಿ ಮಾಡುವವರೆಗೆ ಪ್ರತಿ ಋತುಚಕ್ರದ ವೇಳೆ ಆ ಪದರ ಒಡೆದು ರಕ್ತಸ್ರಾವವಾಗುತ್ತದೆ. ಈ ಪ್ರಕ್ರಿಯೆ ಆಕೆ ಗರ್ಭಿಣಿಯಾದಾಗ ನಿಲ್ಲುತ್ತದೆ. ಪ್ರತೀ ಮಾಸ ಆಕೆಯ ದೇಹದಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಈ ಸಮಯದಲ್ಲಿ ಆಕೆ ಹೊಟ್ಟೆ ನೋವು, ಮಾನಸಿಕ ಮತ್ತು ದೈಹಿಕವಾಗಿ ಕಿರಿಕಿರಿ ಅನುಭವಿಸುತ್ತಾಳೆ. ಇಂಥ ಸಂದರ್ಭದಲ್ಲಿ ಆಕೆಗೆ ಸಾಕಷ್ಟು ಸಮಯದ ಅವಶ್ಯಕತೆ ಕೂಡ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಕೆಗೆ ಪ್ರತ್ಯೇಕ ಕಾಲಾವಕಾಶ ನೀಡಲು ಕೆಲವು ನಿರ್ಬಂಧ ವಿಧಿಸಲಾಗಿದೆ. ಆದರೆ, ಕಾಲಾನಂತರದಲ್ಲಿ ಇದರ ಬಗ್ಗೆ ತಪ್ಪು ಕಲ್ಪನೆಗಳು ಮೂಡಿವೆ.