ಶಿಕ್ಷಣಕ್ಕೂ ವಯಸ್ಸಿಗೂ ಸಂಬಂಧವಿಲ್ಲ ಎಂದು ಅನೇಕ ಮಹಿಳೆಯರು ಸಾಬೀತುಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಯಾವುದೇ ವೃತ್ತಿಯೂ ವಯಸ್ಸಿನ ಮಿತಿಯನ್ನು ಹೊಂದಿರಬಾರದು ಎಂದು ಕೂಡ ತಜ್ಞರು ತಿಳಿಸುತ್ತಾರೆ. ವಯಸ್ಸಿನ ಹಂಗಿಲ್ಲದೇ, ನಿಮ್ಮ ಆಸಕ್ತಿಗೆ ಅನುಗುಣವಾಗಿ ನಿಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡುವ ಮತ್ತು ಅದರಲ್ಲಿ ನೆಲೆ ಕಂಡುಕೊಳ್ಳುವ ಹಲವು ಅವಕಾಶಗಳಿವೆ. ವಯಸ್ಸು 50 ದಾಟಿದ ಬಳಿಕವೂ ಇಷ್ಟದ ಹಾದಿಯಲ್ಲಿ ಆದಾಯವನ್ನು ಸಂಪಾದಿಸುವ ಅವಕಾಶ ಮಹಿಳೆಯರಿಗಿದೆ. ಅಂತಹ ಕೆಲವು ಮಾರ್ಗಗಳು ಇಲ್ಲಿವೆ.
ಕಲಿಸುವುದರಲ್ಲಿದೆಯಾ ಆಸಕ್ತಿ?ಬಹುತೇಕ ಮಹಿಳೆಯರಿಗೆ ಬೋಧನೆಯಲ್ಲಿ ಆಸಕ್ತಿ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ವೃತ್ತಿಯ ಗೌರವದ ಜೊತೆಗೆ ಆದಾಯವೂ ಸಿಗುತ್ತದೆ. ಇದು ಕೇವಲ ಹರೆಯದ ವಯಸ್ಸಿನರಿಗೆ ಮಾತ್ರವಲ್ಲ. ಈ ವೃತ್ತಿಯ ಬಗ್ಗೆ ಆಸಕ್ತಿ ಇದ್ದರೆ ಅದನ್ನು ಸಂಪಾದನೆ ಮಾರ್ಗವಾಗಿಸಬಹುದು. ನಿಮಗಿಷ್ಟವಾದ ವಿಷಯಗಳನ್ನು ಆರಿಸಿಕೊಂಡು ಅದರಲ್ಲಿ ಮಕ್ಕಳಿಗೆ ಕಲಿಸುವ ಇಚ್ಛೆಯಿಂದ ಶಾಲಾ ಶಿಕ್ಷಕಿಯಾಗಿ ಸೇರಬಹುದು. ಅಥವಾ ಪಾರ್ಟ್ ಟೈಮ್ ಟ್ಯೂಷನ್ ಅನ್ನು ಹೇಳಿಕೊಡಬಹುದು. ಇವೆರಡು ಆಗದೆ ಹೋದರೆ ಸಮಾಲೋಚಕರಾಗಿ ಕೂಡ ವೃತ್ತಿಯನ್ನು ಆಯ್ಕೆ ಮಾಡಬಹುದು. ಈ ಮೂಲಕ ಮಕ್ಕಳಿಗೆ ವೃತ್ತಿ ಕುರಿತು ಸಲಹೆ ನೀಡಬಹುದು. ಈ ಎಲ್ಲಾ ಹಾದಿಗಳನ್ನು ಆರಿಸಿಕೊಳ್ಳುವ ಮುನ್ನ ನಿಮ್ಮ ವೃತ್ತಿಯಲ್ಲಿ ಕಾಲ ಕಾಲಕ್ಕೆ ಆಗುತ್ತಿರುವ ಬದಲಾವಣೆಗಳನ್ನು ಅರಿತು, ಅವುಗಳನ್ನು ಅಳವಡಿಸಿಕೊಂಡು ಮುಂದೆ ಸಾಗುವುದು ಅತ್ಯಂತ ಅವಶ್ಯಕವಾಗುತ್ತದೆ.
ಉದ್ಯಮ..ಅನೇಕ ಮಂದಿಗೆ ತಮ್ಮದೇ ಆದ ಸ್ವಂತ ಉದ್ಯಮ ಆರಂಭಿಸಬೇಕು ಎಂಬ ಕನಸು ಇರುತ್ತದೆ. ಆದರೆ, ಕೆಲಸ, ಮಕ್ಕಳ ಜವಾಬ್ದಾರಿ ಮತ್ತು ಇತರೆ ವೈಯಕ್ತಿಕ ಕಾರಣದಿಂದ ಇದು ಸಾಧ್ಯವಾಗದೇ ಹೋಗಬಹುದು. 50 ವರ್ಷ ದಾಟಿದ ಬಳಿಕ ಈ ವಿಚಾರಗಳಿಂದ ನಿಮಗೆ ಬಿಡುವು ಸಿಗುತ್ತದೆ. ಈ ಸಮಯದಲ್ಲಿ ನಿಮಗೆ ಮುಕ್ತ ಸಮಯದ ಅವಕಾಶವೂ ಇರುತ್ತದೆ. ಈ ಹಿನ್ನೆಲೆ ನಿಮ್ಮ ಪ್ಯಾಷನ್ನತ್ತ ಗಮನಹರಿಸಬಹುದು. ಅಡುಗೆ, ಬೇಕಿಂಗ್, ಕ್ರಾಫ್ಟಿಂಗ್, ಡೇ ಕೇರ್ ಸೇವೆ, ಒಳಾಂಗಣ ವಿನ್ಯಾಸ, ಪೆಟ್ ಸೆಂಟರ್ ಹೀಗೆ ನಿಮಗೆ ಅನ್ನಿಸಿದ ಉದ್ಯಮವನ್ನು ಆರಿಸಿಕೊಳ್ಳಬಹುದು. ಅನೇಕ ಬಾರಿ ನಿಮ್ಮ ಹವ್ಯಾಸಗಳು ಕೂಡ ಉದ್ಯಮವಾಗುತ್ತವೆ. ಆನ್ಲೈನ್ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ನಿಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದು. ಅಥವಾ ಆಫ್ಲೈನ್ನಲ್ಲೇ ಮಾರಾಟ ಮಾಡಬಹುದು. ಅದು ನಿಮ್ಮ ಉತ್ಪನ್ನದ ಖ್ಯಾತಿ ಆಧರಿಸಿ ನೀವು ನಿರ್ಧಾರ ಕೈಗೊಳ್ಳಬಹುದು.
ರಿಯಲ್ ಎಸ್ಟೇಟ್ನಲ್ಲಿಯೂ ಇದೆ ಅನುಭವ:ಕೆಲವು ಮಹಿಳೆಯರಲ್ಲಿ ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡುವ ಹುಮ್ಮಸ್ಸು ಇರುತ್ತದೆ. ತಜ್ಞರು ಹೇಳುವಂತೆ ಇಂತಹ ಜನರು ರಿಯಲ್ ಎಸ್ಟೇಟ್ ವಲಯದಲ್ಲೂ ಕೈ ಹಾಕಬಹುದು. ಅಂಕಿ ಅಂಶಗಳ ಪ್ರಕಾರ ಶೇ 60ರಷ್ಟು ಮಹಿಳೆಯರು ಪೂರ್ಣ ಪ್ರಮಾಣ ಅಥವಾ ಅರೆ ಕಾಲಿಕವಾಗಿ ಈ ಕ್ಷೇತ್ರದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಈ ಹಿನ್ನಲೆ ಈ ಕ್ಷೇತ್ರದಲ್ಲೂ ಮುಂದುವರೆಯಬಹುದು. ಇದಕ್ಕೆ ನಿಮ್ಮ ಸಂವಹನ, ನೆಟ್ವರ್ಕಿಂಗ್, ಮಾರ್ಕೆಟಿಂಗ್ ಮುಂತಾದ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಇದರ ಜೊತೆಗೆ ಈ ವಲಯದಲ್ಲಿ ನೋಂದಣಿ, ವೃತ್ತಿಪರ ಲೈಸೆನ್ಸ್, ಸೇರಿದಂತೆ ಇನ್ನಿತರ ಮಾಹಿತಿ ಹೊಂದಿ ಅದರ ಕುರಿತ ಸಂಪೂರ್ಣ ಕೋರ್ಸ್ ಮಾಹಿತಿ ಹೊಂದಿರಬೇಕು.