ಕರ್ನಾಟಕ

karnataka

ETV Bharat / sukhibhava

ಲೈಂಗಿಕ ಕ್ರಿಯೆಗೆ ಒಪ್ಪಿಗೆ ಏಕೆ ಮುಖ್ಯ? ಕೇರಳ ಕಾಲೇಜು ಕ್ಯಾಂಪಸ್​ನಲ್ಲಿ ಸಂವಾದ

ಕೇರಳ ಕಾಲೇಜೊಂದರ ಕ್ಯಾಂಪಸ್​ನಲ್ಲಿ ಇತ್ತೀಚೆಗೆ ಲೈಂಗಿಕ ಶಿಕ್ಷಣ ಕಾರ್ಯಕ್ರಮ ನಡೆಯಿತು. ಪುರುಷನೊಬ್ಬ ಮಹಿಳೆಯನ್ನು ಲೈಂಗಿಕತೆಯ ಉದ್ದೇಶದಿಂದ ಸ್ಪರ್ಶಿಸುವುದು ಹಾಗೂ ಹಸ್ತಮೈಥುನ, ಕನ್ಯತ್ವ ಮುಂತಾದ ವಿಷಯಗಳ ಬಗ್ಗೆ ಸಂವಾದ ನಡೆಯಿತು.

ಸೆಕ್ಸ್‌ನಲ್ಲಿ ಒಪ್ಪಿಗೆ ಏಕೆ ಮುಖ್ಯ? ಕೇರಳ ಕಾಲೇಜು ಕ್ಯಾಂಪಸ್​ನಲ್ಲಿ ಸಂವಾದ
Why is consent important in sex Conversation at Kerala College Campus

By

Published : Jan 29, 2023, 12:44 PM IST

ತಿರುವನಂತಪುರಂ: 'ಸೆಕ್ಸ್‌ನಲ್ಲಿ ಒಪ್ಪಿಗೆ ಏಕೆ ಮುಖ್ಯ?' ಕೇರಳದ ಪ್ರಮುಖ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆದ ಲೈಂಗಿಕ ಶಿಕ್ಷಣ ಕಾರ್ಯಕ್ರಮದ ಸಂದರ್ಭದಲ್ಲಿ ಎರಡನೇ ವರ್ಷದ ಬಿಎ ವಿದ್ಯಾರ್ಥಿ ನಿರ್ಮಲ್ ಎಂಬಾತ ಹೀಗೆ ಪ್ರಶ್ನೆ ಮಾಡಿದರು. ಕ್ಯಾಂಪಸ್‌ನಲ್ಲಿನ ಹುಡುಗಿಯೊಬ್ಬಳ ಬಗ್ಗೆ ತನ್ನ ಲೈಂಗಿಕ ಭಾವನೆಗಳ ಬಗ್ಗೆ ಪ್ರಾಮಾಣಿಕವಾಗಿರುವುದರಲ್ಲಿ ಏನಾದರೂ ತಪ್ಪಿದೆಯೇ ಎಂದು ತಿಳಿಯಲು ಬಯಸಿದ್ದ ಆ 19 ವರ್ಷದ ವಿದ್ಯಾರ್ಥಿ. "ನನಗೆ ಹುಡುಗಿಯೊಬ್ಬಳ ಬಗ್ಗೆ ಭಾವನೆಗಳಿದ್ದರೆ, ಅದನ್ನು ವ್ಯಕ್ತಪಡಿಸಲು ನಾಚಿಕೆಪಡಬೇಕೇ?" ಎಂಬುದು ಆತನ ಮುಂದಿನ ಪ್ರಶ್ನೆಯಾಗಿತ್ತು.

ಲೈಂಗಿಕತೆಯ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಇನ್ನೂ ಸಾಮಾಜಿಕವಾಗಿ ಒಪ್ಪಿತವಾಗಿರದ ಸಮಯದಲ್ಲಿ, ತಿರುವನಂತಪುರಂನ ಪ್ರಸಿದ್ಧ ಯೂನಿವರ್ಸಿಟಿ ಕಾಲೇಜಿನಲ್ಲಿ ಸುಮಾರು 100 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಒಟ್ಟಾಗಿ ಸಂವಾದ ನಡೆಸಿದರು. ಲೈಂಗಿಕತೆಯ ಬಗ್ಗೆ ಮಾತನಾಡುವುದು ತಮ್ಮ ಯೋಗಕ್ಷೇಮದ ವಿಚಾರವಾಗಿದೆ ಎಂಬುದನ್ನು ತೋರಿಸಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸಂಘಟನೆಯು ಲೈಂಗಿಕ ಆರೋಗ್ಯ ವೇದಿಕೆಯಾದ Vvox ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿತ್ತು. Vvox ಇದು ಹಾರ್ವರ್ಡ್​ನಲ್ಲಿ ತರಬೇತಿ ಪಡೆದ ಮತ್ತು ASSECT ಪ್ರಮಾಣೀಕೃತ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಲೈಂಗಿಕಶಾಸ್ತ್ರಜ್ಞರಿಂದ ಬೆಂಬಲಿತ ಲೈಂಗಿಕ ಆರೋಗ್ಯ ವೇದಿಕೆಯಾಗಿದೆ. ASSECT ಎಂಬುದು ಅಮೇರಿಕನ್ ಸೊಸೈಟಿ ಆಫ್ ಸೆಕ್ಸ್ ಎಜುಕೇಟರ್ಸ್, ಕೌನ್ಸೆಲರ್ಸ್ ಮತ್ತು ಥೆರಪಿಸ್ಟ್ಸ್ ಆಗಿದೆ. ಇದು ವೈದ್ಯರನ್ನು ಪ್ರಮಾಣೀಕರಿಸುವ ಮತ್ತು ಅವರಿಗೆ ತರಬೇತಿ ನೀಡುವ ಸಂಸ್ಥೆಯಾಗಿದೆ.

ಹುಡುಗರು ಓರ್ವ ಹೆಣ್ಣು ಅಥವಾ ಮಹಿಳೆಯನ್ನು ಆಕೆಯ ಸ್ಪಷ್ಟ ಒಪ್ಪಿಗೆಯಿಲ್ಲದೆ ಸ್ಪರ್ಶಿಸಬಾರದು ಎಂದು ಕೇರಳ ಹೈಕೋರ್ಟ್ ತೀರ್ಪೊಂದರಲ್ಲಿ ಉಲ್ಲೇಖಿಸಿದ ಒಂದು ವಾರದ ನಂತರ ಈ ಸಂವಾದ ಸಭೆ ನಡೆದಿದೆ. ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಹಸ್ತಮೈಥುನ, ಕನ್ಯತ್ವ, ಅಶ್ಲೀಲತೆ ಮತ್ತು ಲೈಂಗಿಕ ಆರೋಗ್ಯದಲ್ಲಿ ಸರಿಯಾದ ಆಹಾರ ಸೇವನೆಯ ಪ್ರಾಮುಖ್ಯತೆಯನ್ನು ಒಳಗೊಂಡಂತೆ ಇನ್ನೂ ಹಲವಾರು ವಿಚಾರಗಳನ್ನು ಎರಡೂವರೆ ಗಂಟೆಗಳ ಸುದೀರ್ಘ ಸಂವಾದದಲ್ಲಿ ಚರ್ಚಿಸಲಾಯಿತು.

ಸೆಕ್ಸ್​​ನಲ್ಲಿ ಒಪ್ಪಿಗೆಯ ಮಹತ್ವದ ಬಗ್ಗೆ ಹದಿಹರೆಯದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲೈಂಗಿಕತೆ ಶಿಕ್ಷಣತಜ್ಞ ಮತ್ತು Vvox ನ ಸಂಸ್ಥಾಪಕ ಸಂಗೀತ್ ಸೆಬಾಸ್ಟಿಯನ್, "ವ್ಯಕ್ತಿಯೊಬ್ಬ ಮತ್ತೋರ್ವ ವ್ಯಕ್ತಿಯೊಂದಿಗೆ ಲೈಂಗಿಕ ವಿಚಾರದಲ್ಲಿ ಸಂಬಂಧ ಏರ್ಪಡಿಸಿಕೊಳ್ಳುವಾಗ ಆ ಮತ್ತೋರ್ವ ವ್ಯಕ್ತಿಯೂ ಅದಕ್ಕೆ ಸಹಮತನಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಮುಂದೆ ಎದುರಾಗಬಹುದಾದ ಮುಜುಗರದ ಸನ್ನಿವೇಶಗಳನ್ನು ತಪ್ಪಿಸಬಹುದು" ಎಂದರು. "ನಿಮ್ಮ ಭಾವನೆಗಳು ಬೇರೆಯವರಿಗೆ ಅಹಿತಕರ ಬಾವನೆ ಮೂಡಿಸುತ್ತವೆಯಾ ಅಥವಾ ಇಲ್ಲವಾ ಎಂಬುದನ್ನು ನಿಮಗೆ ನಿಯಂತ್ರಿಸಲು ಸಾಧ್ಯವಿಲ್ಲ" ಎಂದು ಸೆಬಾಸ್ಟಿಯನ್ ಹೇಳಿದರು.

"ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ನಿಯಂತ್ರಣ ಪ್ಲಾಟ್​ಫಾರ್ಮ್ ಆಗಿರುವ ಪಿಕ್ಸ್​ ಸ್ಟೋರಿ, ತಿರುವನಂತಪುರ ಮೂಲದ ರೆಸ್ಟೊರೆಂಟ್ ಮತ್ತು ಲಿಂಗತ್ವ ಸಂವೇದನೆ ವೇದಿಕೆ ಕನಾಲ್ ಇವುಗಳ ಸಹಯೋಗದಲ್ಲಿ Vvox ಸಂಘಟನೆಯು ರಾಜ್ಯದಾದ್ಯಂತ ಕಾಲೇಜು ಕ್ಯಾಂಪಸ್‌ಗಳಲ್ಲಿ ವೈದ್ಯಕೀಯವಾಗಿ ನಿಖರವಾದ, ವೈಜ್ಞಾನಿಕ ಮತ್ತು ವಾಸ್ತವ ಆಧರಿತ ಲೈಂಗಿಕ ಶಿಕ್ಷಣವನ್ನು ಒದಗಿಸುವ ಉದ್ದೇಶ ಹೊಂದಿದೆ" ಎಂದು ಸೆಬಾಸ್ಟಿಯನ್ ಹೇಳಿದರು.

ಸೆಕ್ಸ್ ಬಗ್ಗೆ ವಿಶೇಷವಾಗಿ ಹಸ್ತಮೈಥುನ ಮತ್ತು ಕನ್ಯತ್ವಕ್ಕೆ ಸಂಬಂಧಿಸಿದ ಬಹಳಷ್ಟು ತಪ್ಪು ಕಲ್ಪನೆಗಳನ್ನು ನಿವಾರಿಸಲು ಈ ಸಂವಾದ ಸಹಾಯಕವಾಯಿತು ಎಂದು ಅಂತಿಮ ವರ್ಷದ ಬಿಎ ರಾಜ್ಯಶಾಸ್ತ್ರ ವಿದ್ಯಾರ್ಥಿಯಾದ ತಾಪಸ್ಯ ಎಂ ಹೇಳಿಕೊಂಡರು. "ಸೆಕ್ಸ್ ಎಂಬುದು ಒಂದು ಕೆಟ್ಟ ಪದವಲ್ಲ. ಇದು ವ್ಯಕ್ತಿಯ ಆರೋಗ್ಯಕರ ಜೀವನದ ಅವಿಭಾಜ್ಯ ಅಂಗವಾಗಿದೆ" ಎಂದು ತಾಪಸ್ಯ ಮಾಧ್ಯಮದವರಿಗೆ ತಿಳಿಸಿದರು.

ತಾಪಸ್ಯ ಅವರ ಅಭಿಪ್ರಾಯವನ್ನು ಎರಡನೇ ವರ್ಷದ ಭೂವಿಜ್ಞಾನ ವಿದ್ಯಾರ್ಥಿನಿ ಮಾಯಾ ಎಂಬುವರು ಕೂಡ ಬೆಂಬಲಿಸಿದರು. ಈ ಸಂವಾದವು ಇಂದಿನ ಪೀಳಿಗೆಯ ಯುವ ಸಮುದಾಯದ ಮನಸಿಗೆ ತಟ್ಟಿತು ಎಂದರು. "ನನ್ನ ಶಾಲೆಯಲ್ಲಿ ನನಗೆ ಎಂದಿಗೂ ಲೈಂಗಿಕ ಶಿಕ್ಷಣ ಕಲಿಸಲಿಲ್ಲ. ಇಂದು, ಲೈಂಗಿಕತೆಯ ಬಗ್ಗೆ ನಾಚಿಕೆಪಡುವ ಅಗತ್ಯವಿಲ್ಲ ಎಂದು ನಾನು ಕಲಿತಿದ್ದೇನೆ. ಇದು ಜವಾಬ್ದಾರಿ ಮತ್ತು ಗೌರವದಿಂದ ಅರ್ಥಮಾಡಿಕೊಳ್ಳಬೇಕಾದ ವಿಷಯ" ಎಂದು ಅವರು ಹೇಳಿದರು.

ಪ್ರಾಣಿಶಾಸ್ತ್ರ ಮತ್ತು ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಸಹಾಯಕ ಪ್ರಾಧ್ಯಾಪಕಿ ಶೀಬಾ ಎಸ್ ಮಾತನಾಡಿ, "ಹೆಚ್ಚಿನ ಯುವಕರು ಇಂಟರ್‌ನೆಟ್ ಪೋರ್ನ್ ಅನ್ನೇ ವಾಸ್ತವಿಕ ಲೈಂಗಿಕ ಶಿಕ್ಷಣ ಎಂದುಕೊಂಡಿದ್ದಾರೆ. ಅಶ್ಲೀಲತೆಯನ್ನೇ ಲೈಂಗಿಕತೆ ಎಂದುಕೊಳ್ಳುವುದರಿಂದ ನಿಮಗೆ ಲೈಂಗಿಕತೆಯ ಬಗ್ಗೆ ವಿಕೃತ ಮತ್ತು ಉತ್ಪ್ರೇಕ್ಷಿತ ಕಲ್ಪನೆಗಳನ್ನು ಮೂಡುತ್ತವೆ. ಅದಕ್ಕಾಗಿಯೇ ಯುವ ಪೀಳಿಗೆಗೆ ವೈದ್ಯಕೀಯವಾಗಿ ನಿಖರವಾದ ಲೈಂಗಿಕ ಶಿಕ್ಷಣ ಒದಗಿಸುವುದು ತುಂಬಾ ಮುಖ್ಯವಾಗಿದೆ" ಎಂದು ಶೀಬಾ ಮಾಧ್ಯಮದವರಿಗೆ ತಿಳಿಸಿದರು.

ತಿನ್ನಿರಿ, ಆಟವಾಡಿ, ಪ್ರೀತಿಸಿ, ಜವಾಬ್ದಾರಿಯುತವಾಗಿ' (Eat, Play, Love, responsibly) ಎಂಬ ಶೀರ್ಷಿಕೆಯ ಈ ಸಂವಾದದಲ್ಲಿ ಸಂವಾದಾತ್ಮಕ ಸೆಷನ್‌ಗಳು, ಪವರ್‌ಪಾಯಿಂಟ್ ಪ್ರಸ್ತುತಿಗಳು ಮತ್ತು ಸ್ಪರ್ಧೆಗಳ ಮೂಲಕ ಲೈಂಗಿಕ ಆರೋಗ್ಯ ಮತ್ತು ಆಹಾರ-ಫಿಟ್‌ನೆಸ್ ನಡುವಿನ ಸಂಬಂಧವನ್ನು ತಿಳಿಸಿತು. "ನೀವು ಸರಿಯಾದ ಮಾಹಿತಿಯನ್ನು ಹೊಂದಿದ್ದರೆ, ಸುಮಾರು ಶೇ 80 ರಷ್ಟು ಲೈಂಗಿಕ ತೊಂದರೆಗಳನ್ನು ಯಾವುದೇ ಔಷಧಿ ಅಥವಾ ವೈದ್ಯಕೀಯ ಹಸ್ತಕ್ಷೇಪವಿಲ್ಲದೆ ಸುಲಭವಾಗಿ ಪರಿಹರಿಸಬಹುದು" ಎಂದು ಸೆಬಾಸ್ಟಿಯನ್ ಹೇಳಿದರು.

ಇದನ್ನೂ ಓದಿ: ಅಪ್ರಾಪ್ತ ಹುಡುಗಿಯರ ವಿವಾಹವಾದ ಗಂಡಂದಿರಿಗೆ ಜೈಲು: ಅಸ್ಸಾಂ ಸಿಎಂ ಹಿಮಂತ್​

ABOUT THE AUTHOR

...view details