ಇಂಡಿಯನ್ ಹಾರ್ಟ್ ಅಸೋಸಿಯೇಷನ್‌ನ ಪ್ರಕಾರ, ಭಾರತದಲ್ಲಿ ಶೇಕಡಾ 33 ರಷ್ಟು ಜನರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಹೃದಯಾಘಾತ ಸಂಭವಿಸುತ್ತದೆ. ಪುರುಷರಿಗೆ, ಶೇಕಡಾ 50 ರಷ್ಟು ಹೃದಯಾಘಾತಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 25 ರಷ್ಟು ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ.
1970 ರ ನಂತರ ಜನಿಸಿದವರ ಜೀವನ ಶೈಲಿ ತುಂಬಾ ವಿಭಿನ್ನವಾಗಿದೆ. ಪಾಶ್ಚಿಮಾತ್ಯ ಆಹಾರ ಪದ್ಧತಿ, ಜೀವನಶೈಲಿ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಯಗಳಾಗುತ್ತವೆ. ದೇಶದಲ್ಲಿ ಪ್ರತಿವರ್ಷ ಶೇಕಡಾ 28 ರಷ್ಟು ಮಂದಿ ಹೃದಯಾಘಾತದಿಂದ ಮೃತಪಡುತ್ತಾರೆ.
ಹೆಚ್ಚಾದ ಮಾನಸಿಕ ಒತ್ತಡ
ದಿ ಲ್ಯಾನ್ಸೆಟ್ನ 2017 ರ ಅಧ್ಯಯನದ ಪ್ರಕಾರ, ಭಾರತದಲ್ಲಿ 197.3 ಮಿಲಿಯನ್ (1 ಕೋಟಿ 97 ಲಕ್ಷ) ಮಂದಿ ಮಾನಸಿಕ ಅಸ್ವಸ್ಥತೆ, 45.7 ಮಿಲಿಯನ್ ಜನ ಖಿನ್ನತೆ, 44.9 ಮಿಲಿಯನ್ ಜನರು ಆತಂಕದಿಂದ ಬಳಲುತ್ತಿದ್ದಾರೆ. ಕೆಲವೊಮ್ಮೆ ವಿವಿಧ ಕಾರಣಗಳಿಂದ ಒತ್ತಡ ಉಂಟಾಗಿ ಹೃದಯದ ಬಡಿತದಲ್ಲಿ ಏರಿಳಿತವಾಗಬಹುದು.
ವ್ಯಾಯಾಮ ಮಾಡಿದ್ರೂ, ಪೌಷ್ಠಿಕಯುಕ್ತ ಆಹಾರ ಸೇವಿಸಿದ್ರೂ, ಹೃದಯಾಘಾತ ಸಂಭವಿಸುತ್ತವೆ ಯಾಕೆ?
ವ್ಯಾಯಾಮ ಮಾಡಿ ಒತ್ತಡ ನಿವಾರಣೆ ಮಾಡಲು ಪ್ರಯತ್ನಿಸಬಹುದು. ಆದರೆ, ಅಧಿಕ ಒತ್ತಡವು ಜನರನ್ನು ಆಲ್ಕೋಹಾಲ್, ಡ್ರಗ್ಸ್ ಸೇವನೆಗೆ ಪ್ರೇರೇಪಿಸುತ್ತದೆ. ಒತ್ತಡದಿಂದ ಪಾರಾಗಲು ಧೂಮಪಾನ, ಮದ್ಯಪಾನದ ಅಡಿಯಾಳಾಗುತ್ತಾರೆ. ಇವುಗಳಿಂದ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾಗಲಿದ್ದು, ಅದು ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ.
ಸೊಪ್ಪು, ತರಕಾರಿಗಳನ್ನು ಸೇವಿಸುವ ಮೂಲಕ ಜನರು ಆಹಾರದ ವಿಷಯದಲ್ಲಿ ಆರೋಗ್ಯಕರ ಆಯ್ಕೆಗಳನ್ನು ಮಾಡಬೇಕು. ಮದ್ಯಪಾನ, ಧೂಮಪಾನ ತ್ಯಜಿಸಿ, ಜೀವನಶೈಲಿ ಬದಲಾವಣೆಗೆ ಹೆಚ್ಚಿನ ಒತ್ತು ಕೊಡಬೇಕು. ಕನಿಷ್ಠ 7ರಿಂದ 8 ಗಂಟೆಗಳವರೆಗೆ ನಿದ್ದೆ ಮಾಡಬೇಕು. ಹೃದಯ ಸಂಬಂಧಿ ಕಾಯಿಲೆ ಇರುವವರು ವರ್ಷಕ್ಕೊಮ್ಮೆ ತಪಾಸಣೆಗೊಳಪಡಿಸಬೇಕು.
ಹೃದಯಾಘಾತಕ್ಕೆ ಕಾರಣವೇನು?
ಹೃದ್ರೋಗ ಶಾಸ್ತ್ರಜ್ಞರ ಪ್ರಕಾರ, ಅನುವಂಶೀಯತೆ ಹಾಗೂ ಜೀವನಶೈಲಿಯಿಂದಲೂ ರೋಗ ಕಾಣಿಸಿಕೊಳ್ಳಲಿದೆ. ಸ್ಥೂಲಕಾಯ, ಮಧುಮೇಹ, ಟ್ರೈಗ್ಲಿಸರೈಡ್ ನಿಂದಲೂ ಹೃದಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇವುಗಳನ್ನೆಲ್ಲ ಒಟ್ಟಾಗಿ ಮೆಟಾಬಾಲಿಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅನಿಯಮಿತ ಆಹಾರದ ಸೇವನೆ, ಮಾನಸಿಕ ಒತ್ತಡ, ಶಕ್ತಿ ಪಾನೀಯಗಳು, ಆಲ್ಕೋಹಾಲ್, ತಂಬಾಕು ಸೇವನೆ, ನಿದ್ರಾಹೀನತೆಯೂ ಹೃದಯಾಘಾತಕ್ಕೆ ಕಾರಣವಾಗಬಹುದು.
ತಂಬಾಕು ಸೇವನೆಯು ಹೃದ್ರೋಗವನ್ನು ಉಲ್ಭಣಗೊಳಿಸುವ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. 30 - 44 ವಯಸ್ಸಿನ ಜನರಲ್ಲಿ ಶೇಕಡಾ 26 ರಷ್ಟು ಹೃದಯರಕ್ತನಾಳದ ಕಾಯಿಲೆಗಳು ತಂಬಾಕು ಸೇವನೆಯಿಂದ ಉಂಟಾಗುತ್ತವೆ. ಪ್ರತಿ ವರ್ಷ ಹೃದಯ ರಕ್ತನಾಳದ ಕಾಯಿಲೆಯಿಂದ ಉಂಟಾಗುವ ಒಟ್ಟು ಸಾವುಗಳಲ್ಲಿ ಶೇಕಡಾ 16 ರಷ್ಟು ಧೂಮಪಾನದಿಂದ ಸಂಭವಿಸಿವೆ. ಅನುವಂಶೀಯವಾಗಿಯೂ ಹೃದ್ರೋಗ ಕಾಣಿಸಿಕೊಳ್ಳುತ್ತದೆ ಎಂದು AIIMS ನ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಅಂಬುಜ್ ರಾಯ್ ಹೇಳಿದ್ದಾರೆ.
ಹೃದ್ರೋಗ ಸಮಸ್ಯೆ ತಡೆಗಟ್ಟಲು ನೀವು ಮಾಡಬೇಕಿರೋದೇನು?
- 20 ರಿಂದ 40 ವರ್ಷ ವಯಸ್ಸಿನ ಜನರು ಪ್ರತಿ ಐದು ವರ್ಷಗಳಿಗೊಮ್ಮೆ, 40 ರ ನಂತರ ವಾರ್ಷಿಕವಾಗಿ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
- ವ್ಯಾಯಾಮ ಮತ್ತು ಜೀವನಶೈಲಿ ಬದಲಾವಣೆ ಮಾಡಬೇಕೆಂದರೆ, ತಜ್ಞರ ಸಲಹೆ ಪಡೆಯಿರಿ. ಬಳಿಕ ವರ್ಷಕ್ಕೊಮ್ಮೆ ಹೃದಯ ಆರೋಗ್ಯ ತಪಾಸಣೆಯನ್ನು ಮಾಡಿಸಿ
- ದೈನಂದಿನ ಆಹಾರದಲ್ಲಿ ಸಕ್ಕರೆ, ಉಪ್ಪು, ಕೊಲೆಸ್ಟ್ರಾಲ್ ಯುಕ್ತ ಪದಾರ್ಥಗಳನ್ನು ಕಡಿಮೆ ಬಳಸಿ.