ಫಿಟ್ನೆಸ್, ವ್ಯಾಯಾಮ ಮತ್ತು ಧ್ಯಾನಕ್ಕೆ ಒತ್ತು ನೀಡಿ ಸದೃಢ ದೇಹ ಹೊಂದಿದ್ದ ಕಿರುತರೆ ಹಾಗೂ ಚಲನಚಿತ್ರ ನಟ ಸಿದ್ಧಾರ್ಥ್ ಶುಕ್ಲಾ (40) ಹೃದಯಾಘಾತದಿಂದಾಗಿ ಗುರುವಾರ ಇಹಲೋಕ ತ್ಯಜಿಸಿದರು. 'ಬಾಲಿಕಾ ವಧು' ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದು, ಹಿಂದಿಯ ಬಿಗ್ಬಾಸ್ ಸೀಸನ್-13 ವಿಜೇತರಾಗಿದ್ದ ಶುಕ್ಲಾರ ಅಕಾಲಿಕ ಮರಣ ಎಲ್ಲರಿಗೂ ಆಘಾತ ನೀಡಿದೆ. ಫಿಟ್ & ಯಂಗ್ ಆಗಿದ್ರೂ ಏಕೆ ಜನರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಗೊತ್ತಾ? ಅದಕ್ಕೆ ಕಾರಣಗಳು ಇಲ್ಲಿವೆ ನೋಡಿ.
ಸಾಮಾನ್ಯವಾಗಿ ಸ್ಥೂಲಕಾಯತೆ, ಆರೋಗ್ಯ ಶೈಲಿ, ಜಡ ಜೀವನಶೈಲಿ ಮತ್ತು ವೃದ್ಧಾಪ್ಯವು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಿವೆ. ಆದರೆ, ಹೆಚ್ಚಿನ ಕೆಲಸದ ಒತ್ತಡ, ಹೆಚ್ಚೆಚ್ಚು ವರ್ಕ್ ಔಟ್ ಮಾಡುವುದು ಹಾಗೂ ಈಗ ಕೋವಿಡ್ ಕೂಡ ಹೃದಯ ಸಂಬಂಧಿ ಅಪಾಯಗಳನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ..!
ಒತ್ತಡವೇ ಪ್ರಮುಖ ಕಾರಣ
ವ್ಯಕ್ತಿಯ, ಅದರಲ್ಲಿಯೂ ಯುವಜನರ ಜೀವನಶೈಲಿಯ ಬಗ್ಗೆ ಸಂಪೂರ್ಣ ಒಳನೋಟವನ್ನು ಹೊಂದಲು ಎಂದಿಗೂ ನಮಗೆ ಸಾಧ್ಯವಿಲ್ಲ. ಆದರೆ, ಯುವಕರು ಅಧಿಕ ಒತ್ತಡವಿರುವಲ್ಲಿ ಕೆಲಸ ಮಾಡುತ್ತಿದ್ದು, ಒತ್ತಡವನ್ನು ಎದುರಿಸಲು ಅಹಿತಕರ ಜೀವನಶೈಲಿ ಅಳವಡಿಸಿಕೊಂಡಿದ್ದಾರೆ. ಉದ್ಯೋಗ ಎಷ್ಟು ಮುಖ್ಯವೋ, ಜೀವನಶೈಲಿಯ ಸಮತೋಲನ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಹೇಳುತ್ತಾರೆ ದೆಹಲಿಯ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಮತ್ತು ಹೃದಯ ತಜ್ಞ ಡಾ. ಆನಂದ್ ಕುಮಾರ್ ಪಾಂಡೆ.
ವ್ಯಾಯಾಮ
ಆಧುನಿಕ ಜೀವನಶೈಲಿ ಪಾಲಿಸುವ ಯುವಕರು ಜಂಕ್ ಫುಡ್ಗಳನ್ನು ತಿಂದು, ಬೊಜ್ಜು ಬರಿಸಿಕೊಂಡು ಅದನ್ನು ಕಡಿಮೆ ಮಾಡಲು ಹಿಗ್ಗಾಮುಗ್ಗಾ ವ್ಯಾಯಾಮ ಮಾಡುತ್ತಾರೆ. ಅಧಿಕ ಮಟ್ಟದ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ನಿರ್ಬಂಧಗಳನ್ನು ಉಂಟು ಮಾಡಬಹುದು. ಈ ವೇಳೆ ಮಾಡುವ ಹೆಚ್ಚು ವ್ಯಾಯಾಮ ರಕ್ತನಾಳಗಳ ಮೇಲೆ ಒತ್ತಡ ಹೇರುತ್ತದೆ. ಹೀಗಾಗಿ, ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದೂ ಕೂಡ ಹೃದಯಾಘಾತಕ್ಕೆ ಕಾರಣವಾಗಬಹುದು.