ಸಾಮಾನ್ಯವಾಗಿ ಬಂಜೆತನ ಸಮಸ್ಯೆ ಮಹಿಳೆಯರಿಗೆ ಮಾತ್ರವೇ ಸಂಬಂಧಿಸಿದ್ದು ಎಂಬುದಾಗಿ ಭಾವಿಸುತ್ತೇವೆ. ಆದರೆ ಪುರುಷರು ಸಹ ಬಂಜೆತನಕ್ಕೆ ಒಳಗಾಗಬಹುದು. ಹೀಗಾಗಿ ಬಂಜೆತನವು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ ಎಂಬುದು ಸತ್ಯ.
ಹೌದು, ಕೆಲ ಸಂದರ್ಭದಲ್ಲಿ ಆರೋಗ್ಯವಾಗಿದ್ದರೂ, ಮಹಿಳೆಯೊಬ್ಬಳು ಗರ್ಭ ಧರಿಸಲು ಸಾಧ್ಯವಾಗದಂತಹ ಸನ್ನಿವೇಶ ಎದುರಾಗುತ್ತದೆ. ಆಕೆ ಗರ್ಭ ಧರಿಸುವ ಎಲ್ಲಾ ಸಾಮರ್ಥ್ಯ ಹಾಗೂ ಬಂಜೆತನ ಸಮಸ್ಯೆಯೇ ಆಕೆಯಲ್ಲಿ ಇಲ್ಲದಿದ್ದಾಗ ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಕಾರಣ ಆಕೆಯ ಸಂಗಾತಿ. ಸ್ತ್ರೀಯ ಗರ್ಭಧಾರಣೆಯನ್ನು ಸಕ್ರಿಯಗೊಳಿಸಲು ಆಕೆಯ ಸಂಗಾತಿ ಪ್ರಾಯೋಗಿಕವಾಗಿ ಅಸಮರ್ಥನಾದಾಗ ಮಹಿಳೆ ಗರ್ಭಧರಿಸುವುದು ಅಸಾಧ್ಯವಾಗುತ್ತದೆ. ಇದನ್ನೇ ಪುರುಷ ಬಂಜೆತನ ಅಥವಾ Male infertility ಎಂದು ಕರೆಯುತ್ತೇವೆ.
ಪುರುಷರಲ್ಲಿ ಕಂಡುಬರುವ ಈ ಸಮಸ್ಯೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈಟಿವಿ ಭಾರತವು ಹೈದರಾಬಾದ್ ಮೂಲದ ವೈದ್ಯರಾದ ಡಾ. ರಾಹುಲ್ ರೆಡ್ಡಿ ಅವರೊಂದಿಗೆ ಮಾತನಾಡಿದೆ. ಡಾ. ರಾಹುಲ್ ರೆಡ್ಡಿ, ಪುರುಷ ಬಂಜೆತನದ ಕಾರಣಗಳು ಹಾಗೂ ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿಸಿದ್ದಾರೆ.
ಪುರುಷ ಬಂಜೆತನಕ್ಕೆ ಪ್ರಮುಖ ಕಾರಣ, ಕಡಿಮೆ-ವೀರ್ಯಾಣುಗಳ ಸಂಖ್ಯೆ(low-sperm count) ಅಥವಾ ಅನಾರೋಗ್ಯಕರ ವೀರ್ಯ(unhealthy sperms) ಎಂದು ಡಾ. ರೆಡ್ಡಿ ಹೇಳುತ್ತಾರೆ. ವಯಸ್ಸು, ಅನಿಯಮಿತ ಜೀವನ ಶೈಲಿ, ಅತಿಯಾದ ಒತ್ತಡ ಅಥವಾ ಅನುವಂಶಿಕ ಕಾರಣಗಳಿಂದಾಗಿ, ಪುರುಷ ದೇಹವು ಹೆಣ್ಣು ಮೊಟ್ಟೆಗಳನ್ನು ಫಲವತ್ತಾಗಿಸಲು ಸಾಕಷ್ಟು ಅಥವಾ ಆರೋಗ್ಯಕರ ವೀರ್ಯಾಣುಗಳನ್ನು ಉತ್ಪಾದಿಸಲು ಅಸಮರ್ಥವಾಗುತ್ತದೆ ಎಂದು ಅವರು ವಿವರಿಸುತ್ತಾರೆ. ದೇಹದಲ್ಲಿ ವೀರ್ಯಾಣುಗಳ ಕಡಿಮೆ ಉತ್ಪಾದನೆ, ಅನಾರೋಗ್ಯಕರ ವೀರ್ಯಗಳು ಮತ್ತು ತಪ್ಪಾದ ವೀರ್ಯಗಳಿಂದ ಪುರುಷ ಬಂಜೆತನ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಈ ಸಮಸ್ಯೆಯನ್ನು ಮೂರು ವಿಧಗಳಾಗಿ ವಿಂಗಡಿಸಬಹುದು:
ಅಜೂಸ್ಪರ್ಮಿಯಾ: ಪುರುಷನ ವೀರ್ಯ (ಸಂಭೋಗ ಸಮಯದಲ್ಲಿ ಸ್ಖಲನಗೊಳ್ಳುವ ದ್ರವ) ಯಾವುದೇ ಗುಣಮಟ್ಟದ ವೀರ್ಯಾಣುವನ್ನು ಹೊಂದಿರುವುದಿಲ್ಲ, ಅಥವಾ ತುಂಬಾ ಕಡಿಮೆ ಗುಣಮಟ್ಟದ ವೀರ್ಯಾಣುಗಳನ್ನು ಹೊಂದಿರಬಹುದು. ಇದರಿಂದಾಗಿ ಸ್ತ್ರೀ ದೇಹದಲ್ಲಿನ ಮೊಟ್ಟೆಗಳು ಫಲವತ್ತಾಗದೆ ಗರ್ಭಧಾರಣೆ ಆಗುವುದಿಲ್ಲ.