ಕರ್ನಾಟಕ

karnataka

ETV Bharat / sukhibhava

ಬೆನ್ನು ನೋವು ನಿಮ್ಮನ್ನು ಕಾಡುತ್ತಿದೆಯೇ : ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.. - Sciatica news

ಬೆನ್ನು ನೋವು ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಆರೋಗ್ಯ ಸಮಸ್ಯೆ ಎಂದು ಹೇಳಬಹುದು. ನಮ್ಮ ಜೀವನ ಶೈಲಿ ಹಾಗೂ ಆರೋಗ್ಯ ಪದ್ಧತಿಯಿಂದಾಗಿ ಇಂದು ಶೇ. 84ರಷ್ಟು ಜನರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆಯು ಇದ್ದಕ್ಕಿದ್ದಂತೆ ಕಾಡಬಹುದು..

ಬೆನ್ನು ನೋವು
ಬೆನ್ನು ನೋವು

By

Published : Dec 1, 2020, 7:16 PM IST

ಬೆನ್ನು ನೋವಿನ ಕಾರಣಗಳು ಯಾವುದೋ ಒಂದು ವಿಷಯಕ್ಕೆ ಸೀಮಿತವಾಗಿರುವುದಿಲ್ಲ. ಅದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಬೆನ್ನು ನೋವು ಕಂಡು ಬರುತ್ತದೆ. ಇಂತಹವರ ಸಂಖ್ಯೆ ಈಗೀಗ ಹೆಚ್ಚುತ್ತಿದೆ.

ಏರುತ್ತಿರುವ ಬೊಜ್ಜು ಮತ್ತು ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ ಕುಳಿತೇ ಕೆಲಸ ಮಾಡುವುದು ಇದಕ್ಕೆ ಕಾರಣ. ಇವುಗಳಿಂದ ಬೆನ್ನು ಹುರಿಯ ಸಹಜ ರಚನೆಯಲ್ಲಿ ವ್ಯತ್ಯಾಸ ತೋರಿ, ನೋವುಂಟಾಗುವ ಸಂಭವ ಹೆಚ್ಚು.

ಆಹಾರ ಪದ್ದತಿ, ಬದಲಾದ ಕೆಲಸದ ಮಾದರಿ, ಜೀವನ ಪದ್ಧತಿಗಳಿಂದ ಬೆನ್ನು ನೋವು ಸಾಮಾನ್ಯವಾಗಿಬಿಟ್ಟಿದೆ. 30-40ರ ಹರೆಯದಲ್ಲೇ ಬೆನ್ನು ನೋವಿನಿಂದ ವಿವಿಧ ಬಗೆಯ ಚಿಕಿತ್ಸೆಗಾಗಿ ಸರ್ಕಸ್‌ ಮಾಡುವವರ ಸಂಖ್ಯೆಯೇ ಈಗ ಹೆಚ್ಚಾಗಿದೆ. ಇದನ್ನು ಲೋವರ್ ಬ್ಯಾಕ್‌ ಪೇನ್‌ ಎಂದೂ ಕರೆಯಲಾಗುತ್ತದೆ.

ಬೆನ್ನುನೋವಿಗೆ ಸಿಯಾಟಿಕಾ ಕೂಡ ಮತ್ತೊಂದು ಕಾರಣವಾಗಿದೆ. ಇದು ನಮ್ಮ ದೇಹದ ಸಿಯಾಟಿಕ್ ನರದಲ್ಲಿನ ಸಮಸ್ಯೆಗಳ ಪರಿಣಾಮವಾಗಿ ಸಂಭವಿಸುತ್ತದೆ. ಇದರ ಲಕ್ಷಣಗಳು ಮತ್ತು ಕಾರಣಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈಟಿವಿ ಭಾರತ ಸುಖಿಭವ ತಂಡವು ತಜ್ಞ ಮೂಳೆ ಚಿಕಿತ್ಸಕ ಡಾ.ಎಂ ಜೋಶಿ ಅವರೊಂದಿಗೆ ಮಾತನಾಡಿದೆ. ಅವರು ಈ ಕುರಿತು ಹೀಗೆ ಹೇಳುತ್ತಾರೆ.

ಸಿಯಾಟಿಕಾವನ್ನು ಅರ್ಥೈಸಿಕೊಳ್ಳುವುದು ಹೇಗೆ :ಸಿಯಾಟಿಕಾ ಎಂಬುದು ಸೊಂಟದ ಕೆಳಗಿನ ಭಾಗದಿಂದ ಕಾಲುಗಳ ತಳಭಾಗದವರೆಗೆ ಪ್ರಾರಂಭವಾಗುವ ರಕ್ತನಾಳಗಳಲ್ಲಿನ ನೋವು ಎಂದು ಡಾ. ಜೋಶಿ ಹೇಳುತ್ತಾರೆ. ಸಿಯಾಟಿಕ್ ಎಂಬುದು ಬೆನ್ನುಹುರಿಯಿಂದ ಪ್ರಾರಂಭವಾಗುವ ಮತ್ತು ಎರಡೂ ಕಾಲುಗಳಲ್ಲಿ ಕೆಳಕ್ಕೆ ಚಲಿಸುವ, ಸೊಂಟ ಮತ್ತು ಪೃಷ್ಠದ ಮೂಲಕ ಚಲಿಸುವ ನರಗಳ ಹೆಸರು. ಈ ನರದಲ್ಲಿ ಸಮಸ್ಯೆ ಎದುರಾದಾಗ ಅಥವಾ ಕೆಲವು ಕಾರಣಗಳಿಂದಾಗಿ ಈ ರಕ್ತನಾಳವು ಒತ್ತುವುದನ್ನು ಪ್ರಾರಂಭಿಸಿದರೆ, ಸಿಯಾಟಿಕಾ ನೋವನ್ನು ಅನುಭವಿಸಬಹುದು.

ಸಮಸ್ಯೆ ಮುಂದುವರೆದಂತೆ, ನೋವಿನ ಜೊತೆಗೆ, ಪಾದಗಳಲ್ಲಿನ ಮರಗಟ್ಟುವಿಕೆ ಕೂಡ ಆಗಾಗ್ಗೆ ಅನುಭವಿಸಬಹುದು. ಸಮಸ್ಯೆ ಉಲ್ಬಣಗೊಂಡರೆ ಹಾಗೆ ಬೀಳುವುದು ಅಥವಾ ಪಾರ್ಶ್ವವಾಯು ಮುಂತಾದ ಪರಿಸ್ಥಿತಿಗಳು ಕೂಡ ಉದ್ಭವಿಸಬಹುದು ಎಂದು ಡಾ. ಜೋಶಿ ವಿವರಿಸುತ್ತಾರೆ.

ಬೆನ್ನುನೋವಿನ ಲಕ್ಷಣಗಳುಸ :

ಸೊಂಟದಿಂದ ಪಾದದ ತನಕ ತೀವ್ರ ನೋವಾಗುವುದು. ನೀವು ಚಲಿಸುವಾಗ ಅಥವಾ ಅಲುಗಾಡಿಸಿದಾಗ ಅದು ಅಸಹನೀಯವಾಗುತ್ತದೆ.

ಒಂದು ಕಾಲಿನಲ್ಲಿ ಹೆಚ್ಚು ನೋವಾಗುವಂತೆ ಅನುಭವವಾಗುವುದು ಅಥವಾ ನರಗಳಲ್ಲಿ ನೋವಾಗುವುದು.

ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಂಡ ನಂತರ, ಒಂದು ಕಾಲು ಮರಗಟ್ಟುವುದು ಮತ್ತು ಸೂಜಿಯಂತೆ ಭಾಸವಾಗಿ ಪಾದದಲ್ಲಿ ಚುಚ್ಚುತ್ತದೆ.

ಮಲ ಮೂತ್ರದಂತಹ ದಿನನಿತ್ಯದ ಚಟುವಟಿಕೆಗಳ ಮೇಲೆ ನಿಯಂತ್ರಣದ ಕೊರತೆ.

ಬೆನ್ನುನೋವಿಗೆ ಕಾರಣಗಳು:

ಬೆನ್ನು ಹುರಿಯ ಮಣಿಶಿರಗಳಲ್ಲಾದ ತೊಂದರೆ, ಊತ, ಕ್ಷಯ, ಬೆನ್ನುಮೂಳೆಯ ಸವೆತ

ಕೆಲಸದ ಒತ್ತಡ, ಅತಿಯಾದ ಶ್ರಮ

ಸೊಟ್ಟವಾಗಿ ಕುಳಿತುಕೊಳ್ಳುವುದು, ಮಲಗುವುದು, ಒಮ್ಮಿದೊಮ್ಮೆಲೆ ಹೊರಳಾಡುವುದು, ಬಾಗುವುದು

ವಯಸ್ಸು ಹೆಚ್ಚಾದಂತೆ ಸಂದು ಸವೆತ, ಮೂಳೆ ಸವೆತ, ಎಲುಬುಗಳ ಅಶಕ್ತತೆ

ಧೂಮಪಾನ, ಮದ್ಯಪಾನ, ಮಾದಕ ದ್ರವ್ಯ

ಸದಾ ಸುತ್ತುವ ಹಾಗೂ ದೇಹಕ್ಕೆ ಶ್ರಮ ನೀಡುವ ಯಂತ್ರಗಳಲ್ಲಿ ಕೆಲಸ ಮಾಡುವುದು

ಖಿನ್ನತೆ, ಸ್ಥೂಲಕಾಯ ಮೊದಲಾದವುಗಳು ಬೆನ್ನು ನೋವಿಗೆ ಕಾರಣಗಳಾಗಿವೆ.

ಉಳುಕು, ಬೆನ್ನು ಮೂಳೆಯ ಮುರಿತ, ಸ್ನಾಯು, ಅಸ್ಥಿರಜ್ಜುಗಳು ಹರಿಯುವುದು, ಬಾವು ಅಪಘಾತ, ಸೋಂಕು, ಕ್ಷಯ ರೋಗ, ಮಣಿಶಿರಗಳಲ್ಲಿರುವ ಪದರು ಸರಿಯುವುದು ಕೂಡ ತೀವ್ರ ಸ್ವರೂಪದ ಬೆನ್ನು ನೋವಿಗೆ ಕಾರಣ.

ಮಹಿಳೆಯರಲ್ಲಿ ಮನೆಯಲ್ಲಿ ಅತಿಯಾದ ಕೆಲಸ, ಅತಿಯಾದ ಲೈಂಗಿಕತೆ, ಗರ್ಭಿಣಿಯರಿಗೆ, ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ, ಅತಿಯಾದ ಋತುಸ್ರಾವ, ಬಿಳಿ ಸೆರಗು ಹೋಗುವುದು ಪೌಷ್ಠಿಕ ಆಹಾರದ ಕೊರತೆ, ಕ್ಯಾಲ್ಸಿಯಂ ಕೊರತೆ ಸೇರಿದಂತೆ ಇನ್ನು ಅನೇಕ ಕಾರಣಗಳಿಂದ ಬೆನ್ನು ನೋವು ಕಾಣಿಸುತ್ತದೆ.

ಇವುಗಳನ್ನು ನೆನಪಿನಲ್ಲಿಡಿ:

1 ಕೂರುವಾಗ, ನಿಲ್ಲುವಾಗ, ಮಲಗುವಾಗ ದೇಹವನ್ನು ನೇರವಾಗಿ ಸರಿಯಾಗಿ ಇಟ್ಟುಕೊಳ್ಳಬೇಕು.

2. ಅತಿ ಮೆತ್ತಗಿನ ಹಾಸಿಗೆ ಬೇಡ.

3. ಆದಷ್ಟೂ ಅತಿ ಎತ್ತರದ ಚಪ್ಪಲಿಗಳನ್ನು ಧರಿಸದಿರಿ.

4. ಸೊಂಟದ ಹತ್ತಿರ ಬೊಜ್ಜು ಸೇರದಂತೆ ಜಾಗರೂಕರಾಗಿರಿ. ಊಟದಲ್ಲಿ ಸಮತೋಲನ ಕಾಪಾಡಿ. ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳಿ.

5. ಮೂಳೆ ಸವಕಲಾಗದಂತೆ ಕ್ಯಾಲ್ಷಿಯಂ, ವಿಟಮಿನ್ `ಡಿ' ಮುಂತಾದುವುಗಳ ಪ್ರಮಾಣ ಗಮನದಲ್ಲಿರಲಿ.

ಬೆನ್ನು ನೋವಿನಿಂದ ಮುಕ್ತಿ ಪಡೆಯಲು ಹೀಗೆ ಮಾಡಿ :

ಬೆನ್ನು ನೋವಿದ್ದಾಗ ಬಿಸಿಬಿಸಿಯಾಗಿ ತಿನ್ನಿ. ತಿನ್ನುವ ಪದಾರ್ಥದಲ್ಲಿ ಶುಂಠಿ ಇದ್ದರೆ ಒಳ್ಳೆಯದು.

ನೋವಿರುವ ಭಾಗಕ್ಕೆ ಬೆಚ್ಚಗಿನ ನೀರಿನ ಶಾಖ ನೀಡಿ.

ಪುದಿನಾ ಎಣ್ಣೆಗಳಂಥ ನೈಸರ್ಗಿಕ ಎಣ್ಣೆಗಳಿಂದ ಮಸಾಜ್ ಮಾಡಿ.

ವಿಟಮಿನ್ ಸಿ ಒಳಗೊಂಡಿರುವ ಹಣ್ಣು, ತರಕಾರಿ ಹೆಚ್ಚು ಸೇವಿಸಿ.

ಲಿಂಬೆರಸಕ್ಕೆ ಉಪ್ಪು ಸೇರಿಸಿ ಜ್ಯೂಸ್ ತಯಾರಿಸಿ ಕುಡಿಯಿರಿ.

ಯೋಗ ಮತ್ತು ಧ್ಯಾನವನ್ನು ಮಾಡಿ.

ಕೋಲ್ಡ್‌ ಥೆರಪಿ ಟ್ರೈ ಮಾಡಬಹುದಾಗಿದೆ.

ಬೆನ್ನು ನೋವು ಅನೇಕ ಕಾರಣಗಳಿಂದ ಆರಂಭವಾಗುತ್ತದೆ. ಹೀಗಾಗಿ ಮನೆ ಮದ್ದುಗಳನ್ನು ಆರಂಭಿಸುವುದಕ್ಕು ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಅತಿ ಮುಖ್ಯ. ಅವರ ಸಲಹೆಯ ಪ್ರಕಾರ ಮುಂದಿನ ಹೆಜ್ಜೆ ಇಡುವುದೇ ಸೂಕ್ತವಾಗಿರುತ್ತದೆ.

ABOUT THE AUTHOR

...view details