ನವದೆಹಲಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಾಲಿನ ಬೆಲೆ ಸಾಕಷ್ಟು ಹೆಚ್ಚಾಗಿದ್ದರೂ, ದೆಹಲಿ ಮತ್ತು ಎನ್ಸಿಆರ್ ವಲಯದಲ್ಲಿ ಹಾಲಿನ ಗುಣಮಟ್ಟ ಮಾತ್ರ ಕಳಪೆಯಾಗಿ ಮುಂದುವರೆದಿರುವುದು ಕಂಡು ಬರುತ್ತಿದೆ. ಹಾಲಿನ ಬಗ್ಗೆ ಗ್ರಾಹಕರ ಅಭಿಪ್ರಾಯ ತಿಳಿಯಲು ಆನ್ಲೈನ್ ಕಮ್ಯುನಿಟಿ ಪ್ಲ್ಯಾಟ್ಫಾರ್ಮ್ ಲೋಕಲ್ ಸರ್ಕಲ್ಸ್ (Local Circles) ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವ್ಯಾಪಕ ಸಮೀಕ್ಷೆಯೊಂದನ್ನು ನಡೆಸಿದೆ. ಮನೆಗಳಲ್ಲಿ ಹಾಲಿನ ಬಳಕೆ ಪ್ರಮಾಣ, ಗ್ರಾಹಕರ ಆದ್ಯತೆಗಳು, ತಾಜಾತನ ಮತ್ತು ಗುಣಮಟ್ಟದ ಸಮಸ್ಯೆಗಳನ್ನು ತಿಳಿಯಲು ಈ ಸಮೀಕ್ಷೆ ನಡೆಸಲಾಗಿದೆ.
ಹಾಲಿನ ಬಳಕೆಯ ಬಗ್ಗೆ ಗ್ರಾಹಕರಿಗೆ ಪ್ರಶ್ನೆಗಳನ್ನು ಹಾಕಲಾಯಿತು. ಅಲ್ಲದೇ ತಮಗೆ ಹಾಲು ಯಾವೆಲ್ಲ ರೀತಿಯಲ್ಲಿ ಅಂದರೆ ಯಾರ್ಯಾರ ಮೂಲಕ, ಎಲ್ಲೆಲ್ಲಿಂದ ಬರುತ್ತದೆ ಎಂಬುದನ್ನು ಹಾಲು ಮಾರುವ ವ್ಯಕ್ತಿಗೆ ಪ್ರಶ್ನಿಸುವಂತೆ ಗ್ರಾಹಕರಿಗೆ ಉತ್ತೇಜಿಸಲಾಯಿತು. ಗ್ರಾಹಕರ ಸ್ವಹಿತಾಸಕ್ತಿಗಾಗಿ ಮತ್ತು ಸಮೀಕ್ಷೆಗಾಗಿ ಸತ್ಯ ಆಧರಿತ ಮಾಹಿತಿಗಳನ್ನು ಪಡೆಯಲು ಗ್ರಾಹಕರಿಗೆ ಈ ರೀತಿ ಹೇಳಲಾಗಿತ್ತು.
ಹಾಲಿನ ಗುಣಮಟ್ಟ ಮತ್ತು ಶುದ್ಧತೆಯ ಬಗ್ಗೆ ಗ್ರಾಹಕರು ಸತತವಾಗಿ ತಕರಾರು ಮಾಡುತ್ತಿರುವುದು ಆದ್ಯತೆಯ ವಿಷಯವಾಗಿತ್ತು. ಅಲ್ಲದೇ ಹಾಲು ಕಲಬೆರಕೆಯ ಬಗ್ಗೆಯೂ ಹಲವಾರು ದೂರುಗಳಿದ್ದವು. ಸಮೀಕ್ಷೆಯಲ್ಲಿ ಭಾಗಿಯಾದ 9356 ಜನರ ಪೈಕಿ, ಮೂವರಲ್ಲಿ ಇಬ್ಬರು ತಾವು ಸೇವಿಸುವ ಹಾಲು ಶುದ್ಧವಾಗಿಲ್ಲ ಎಂದು ಹೇಳಿದರೆ, ಮೂವರಲ್ಲಿ ಕೇವಲ ಒಬ್ಬರು ಮಾತ್ರ ತಾವು ಶುದ್ಧವಾದ ಆಕಳು, ಎಮ್ಮೆಯ ಹಾಲನ್ನು ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಮೂವರಲ್ಲಿ ಇಬ್ಬರು ಜನರ ಪೈಕಿ ಶೇ 21 ರಷ್ಟು ಜನ ತಾವು ತರುತ್ತಿರುವ ಹಾಲಿನಲ್ಲಿ ಸಾಕಷ್ಟು ನೀರಿದೆ ಮತ್ತು ಅದರಲ್ಲಿ ಫ್ಯಾಟ್, ಮಿಲ್ಕ್ ಪೌಡರ್ ಸೇರಿಸಲಾಗಿದೆ ಎಂದಿದ್ದಾರೆ. ಇನ್ನು ತಮ್ಮ ಹಾಲು ನೀರಿನಿಂದ ತೆಳುವಾಗಿದೆ ಎಂದು ಅದರಲ್ಲಿ ಶೇ 17 ರಷ್ಟು ಜನ ತಿಳಿಸಿದ್ದಾರೆ.
ಹಾಲಿನ ಗುಣಮಟ್ಟದ ಬಗ್ಗೆ ಅನಿಶ್ಚಿತತೆ:ಇದಲ್ಲದೇ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 8 ರಷ್ಟು ಜನರು ತಾವು ಸೇವಿಸುವ ಹಾಲಿನ ಗುಣಮಟ್ಟದ ಬಗ್ಗೆ ಅನಿಶ್ಚಿತತರಾಗಿದ್ದಾರೆ. ಟೋನ್ಡ್ ಮತ್ತು ಡಬಲ್ ಟೋನ್ಡ್ ಹಾಲಿನಲ್ಲಿ ಕೆನೆರಹಿತ ಹಾಲಿನ ಪುಡಿ ಇರುತ್ತದೆ ಎಂದು ಅನೇಕ ಗ್ರಾಹಕರು ಅರ್ಥಮಾಡಿಕೊಂಡಿರುವುದು ವಿಶೇಷ. ಅಲ್ಲದೇ, ಸಮುದಾಯದ ಚರ್ಚೆಗಳಲ್ಲಿ, ಹಾಲಿನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕೆಲವು ಸಂದರ್ಭಗಳಲ್ಲಿ ಹಾಲಿಗೆ ಬಾಹ್ಯ ಕೊಬ್ಬನ್ನು ಸೇರಿಸುವ ಬಗ್ಗೆ ಜನ ಕಳವಳ ವ್ಯಕ್ತಪಡಿಸಿದರು.