ಬೇಸಿಗೆ ಕಾಲದ ಉರಿ ಜನರನ್ನು ಕಾಡಲಾರಂಭಿಸಿದೆ. ಬೇಸಿಗೆ ಪ್ರಾರಂಭವಾಯಿತೆಂದರೆ ಆರೋಗ್ಯದ ಸಮಸ್ಯೆಗಳು ಅದರಲ್ಲೂ ಚರ್ಮಕ್ಕೆ ಸಂಬಂಂಧಿಸಿದ ಸಮಸ್ಯೆಗಳು ನಮ್ಮನ್ನು ಬಾಧಿಸಲು ಸಾಲಿನಲ್ಲಿ ನಿಂತಿರುತ್ತವೆ. ಅವುಗಳಲ್ಲೂ ಬೆವರುಸಾಲೆ ಬೇಸಿಗೆಯಲ್ಲಿ ತುಂಬಾ ಸಾಮಾನ್ಯವಾದ ಚರ್ಮದ ಸಮಸ್ಯೆ. ಯಾರೇ ಆಗಿರಲಿ ಸಣ್ಣವರಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಬೆವರುಸಾಲೆ ಸಮಸ್ಯೆಯಿಂದ ಬಳಲಿದವರೆ.
ತುಂಬಾ ಸೂಕ್ಷ್ಮವಾಗಿರುವ ಚರ್ಮವಿರುವವರು ಈ ಬೆವರುಸಾಲೆಯಿಂದ ಹೆಚ್ಚು ಕಿರಿಕಿರಿ ಅನುಭವಿಸಿರುತ್ತಾರೆ. ಬೆವರುಸಾಲೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಾದರೂ ಕೆಲವು ಮುನ್ನೆಚ್ಚರಿಕಾ ಕ್ರಮ ಅಥವಾ ಮನೆಮದ್ದುಗಳ ಸಹಾಯದಿಂದ ಇದನ್ನು ತಡೆಯಬಹುದು. ಆದರೆ, ಈ ಬೆವರುಸಾಲೆಯನ್ನು ತಡೆಗಟ್ಟುವಿಕೆ ಬಗ್ಗೆ ಮಾತನಾಡುವ ಮೊದಲು, ಏನಿದು ಬೆವರುಸಾಲೆ? ಯಾಕೆ ಆಗುತ್ತದೆ? ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ.
ಬೆವರುಸಾಲೆ ಎಂದರೇನು? :ಮುಂಬೈನ ಡರ್ಮಾ ಕ್ಲಿನಿಕ್‌ನ ಚರ್ಮರೋಗ ತಜ್ಞ ಡಾ.ಸಬಾ ಶೇಖ್ ಹೇಳುವಂತೆ, ಬೆವರುಸಾಲೆ ಬೇಸಿಗೆಯಲ್ಲಿ ಸಾಮಾನ್ಯ. ಸಾಮಾನ್ಯವಾಗಿ ಬೆನ್ನು, ಕುತ್ತಿಗೆ ಮತ್ತು ಎದೆಯ ಮೇಲೆ ಸಣ್ಣ ಕೆಂಪು ಕಜ್ಜಿಗಳ ಹಾಗೆ ಕಾಣಿಸಿಕೊಳ್ಳುತ್ತವೆ. ಹೆಚ್ಚು ತುರಿಕೆ, ಕಿರಿಕಿರಿ ಅಥವಾ ಉರಿ ಇರುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆವರುವುದು ಹೆಚ್ಚು.
ಆದರೆ, ಕೆಲವೊಮ್ಮೆ ಮಾಲಿನ್ಯ, ಧೂಳು-ಮಣ್ಣು, ಸತ್ತ ಚರ್ಮದ ಜೀವಕೋಶಗಳು ಅಥವಾ ಯಾವುದೇ ಬ್ಯಾಕ್ಟೀರಿಯಾದ ಪರಿಣಾಮದಿಂದಾಗಿ ಬೆವರು ಗ್ರಂಥಿಗಳ ಬಾಯಿ ಮುಚ್ಚಲ್ಪಡುತ್ತದೆ. ಆಗ ಬೆವರು ಚರ್ಮದ ಹೊರಗಡೆ ಬರುವುದಿಲ್ಲ. ಇದರಿಂದಾಗಿ ಸಣ್ಣ ಕೆಂಪು ದದ್ದುಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಇದು ಗಂಭೀರ ಸಮಸ್ಯೆಯಲ್ಲದಿದ್ದರೂ, ತುರಿಕೆ ಮತ್ತು ಸುಡುವಿಕೆ ವ್ಯಕ್ತಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ.
ಬೆವರುಸಾಲೆಗೆ ಮನೆಮದ್ದು: ಈ ಬೆವರುಸಾಲೆಗೆ ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ. ಮನೆಮದ್ದಿನಿಂದ ಮತ್ತು ಕೆಲವು ಮುನ್ನೆಚ್ಚರಿಕಾ ಕ್ರಮಗಳಿಂದ ಬೆವರುಸಾಲೆ ಸಮಸ್ಯೆಯನ್ನು ಪರಿಹರಿಸಬಹುದು. ಪ್ರಕೃತಿ ಚಿಕಿತ್ಸೆಯಲ್ಲಿ ಇದಕ್ಕೆ ಕೆಲವು ಪರಿಹಾರಗಳಿವೆ. ಅವುಗಳಿಂದ ಈ ಬೆವರುಸಾಲೆ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ ಇಂದೋರ್‌ನ ಪ್ರಕೃತಿ ಮತ್ತು ಹೋಮಿಯೋಪತಿ ವೈದ್ಯೆ ಡಾ.ಸ್ಮಿತಾ ಕಾಂಬಳೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
ಅಲೋವೆರಾ ಹಚ್ಚುವುದರಿಂದ ಬೆವರುಸಾಲೆ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗುತ್ತದೆ. ತಾಜಾ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಲೋವೆರಾ ಜೆಲ್ ಅನ್ನು ಬೆವರುಸಾಲೆ ಮೇಲೆ 15 ರಿಂದ 25 ನಿಮಿಷಗಳ ಕಾಲ ಹಚ್ಚಿ, ನಂತರ ನೀರಿನಿಂದ ತೊಳೆದರೆ ಬೆವರುಸಾಲೆಗೆ ಉತ್ತಮ ಪರಿಹಾರ ದೊರೆಯುತ್ತದೆ.
ಮುಲ್ತಾನಿ ಮಿಟ್ಟಿ:ಮುಲ್ತಾನಿ ಮಿಟ್ಟಿಯೂ ಕೂಡ ಬೆವರುಸಾಲೆ ಸಮಸ್ಯೆಗೆ ಸೂಕ್ತ ಮದ್ದು ಎಂದು ಸ್ಮಿತಾ ಹೇಳುತ್ತಾರೆ. ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಬೆರೆಸಿ ಬೆವರುಸಾಲೆ ಇರುವ ಜಾಗಕ್ಕೆ ಹಚ್ಚುವುದರಿಂದ ಬೆವರುಸಾಲೆ ಮತ್ತು ಅದರಿಂದಾದ ಉರಿ ಮತ್ತು ತುರಿಕೆ ನಿವಾರಣೆಯಾಗುತ್ತದೆ.