ಕೋಲ್ಕತ್ತಾ: ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಮಾರಣಾಂತಿಕ ಅಡೆನೊವೈರಸ್ ರೂಪಾಂತರ ಹರಡುವಿಕೆ ಕುರಿತು ಭಾರತೀಯ ಆರೋಗ್ಯ ಸಂಶೋಧನಾ ಮಂಡಳಿ (ಐಸಿಎಂಆರ್) ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಿದೆ
ಐಸಿಎಂಆರ್ ಸಂಯೋಜಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಾಲರಾ ಮತ್ತು ಎಂಟರಿಕ್ ಡಿಸೀಸ್ ನಡೆಸಿದ ಇತ್ತೀಚಿನ ಸಂಶೋಧನಾ ಮಾದರಿ ಪರೀಕ್ಷೆ ಆಧಾರದ ಮೇಲೆ ಈ ಸಂಶೋಧನೆ ಬಹಿರಂಗಪಡಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಈ ಸೋಂಕಿನ ಪ್ರಭಾವ ಕಂಡು ಬಂದಿದ್ದು, ಇದೀಗ ರೂಪಾಂತರ ಹರಡುವಿಕೆ ಪತ್ತೆಯಾಗಿದೆ.
ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ 3,115 ವ್ಯಕ್ತಿಗಳಲ್ಲಿ ಅಡೆನೊವೈರಸ್ ಪಾಸಿಟಿವ್ ಪತ್ತೆಯಾಗಿದೆ. 40 ವ್ಯಕ್ತಿಗಳಲ್ಲಿ ಅದರಲ್ಲೂ ಮಕ್ಕಳಲ್ಲಿ ಮಾರಣಾಂತಿಕ ರೂಪಾಂತರ ಕಂಡು ಬಂದಿದೆ. ಈ ಹಿನ್ನೆಲೆ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ಆರೋಗ್ಯ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ತುರ್ತು ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈ ವರ್ಷದ ಮಾರ್ಚ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ಅಡೆನೊವೈರಸ್ ಆತಂಕಕಾರಿ ರೂಪ ಕಂಡು ಬಂದಿತು. ರಾಜ್ಯ ಆರೋಗ್ಯ ಇಲಾಖೆ ದಾಖಲೆ ಪ್ರಕಾರ, ಡಿಸೆಂಬರ್ 2022ರಿಂದ ಮಾರ್ಚ್ 2023ರವರೆಗೆ 1,200 ವ್ಯಕ್ತಿಗಳಲ್ಲಿ ಅಡೆನೊವೈರಸ್ ಪಾಸಿಟಿವ್ ಕಂಡಿ ಬಂದಿದ್ದು, ಸಾವಿನ ಸಂಖ್ಯೆ ಶೇ 19ರಷ್ಟಿದೆ.
ಆದಾಗ್ಯೂ ಈ ಸಾವಿನ ಸಂಖ್ಯೆಯಲ್ಲಿನ ಅಂಕಿ - ಅಂಶಗಳಲ್ಲಿ ವಿವಾದ ಕಂಡು ಬಂದಿದೆ. ವೈದ್ಯರ ಸಂಘ ತಿಳಿಸುವ ಅಂಕಿ ಅಂಶವನ್ನು ಆರೋಗ್ಯ ಇಲಾಖೆ ಮೊಟಕು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಅಡೆನೊವೈರಸ್ ಪೀಡಿತ ಪ್ರಕರಣ ಮತ್ತು ಅದರ ಮೇಲ್ವಿಚಾರಣೆ ಜೊತೆಗೆ ಅವರಿಗೆ ಸೂಕ್ತ ಚಿಕಿತ್ಸೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಎಂಟು ಸದಸ್ಯರ ತಂಡವನ್ನು ಸ್ಥಾಪಿಸಿದೆ.
ಏನಿದು ಅಡೆನೊವೈರಸ್?: ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಪ್ರಕಾರ, ಇದೊಂದು ವೈರಾಣು ಆಗಿದ್ದು, ದುರ್ಬಲ ಪ್ರತಿ ರಕ್ಷಣಾ ವ್ಯವಸ್ಥೆ ಹೊಂದಿರುವ ಮಕ್ಕಳು ಮತ್ತು ಹಿರಿಯರ ಮೇಲೆ ಇದರ ಪರಿಣಾಮ ಹೆಚ್ಚಿದೆ. ಅದರಲ್ಲೂ ಐದು ವರ್ಷದ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಜ್ವರ, ನೆಗಡಿ, ನ್ಯಮೋನಿಯಾ, ಉಸಿರಾಟ ಕಷ್ಟದಂತಹ ಲಕ್ಷಣವನ್ನು ಹೊಂದಿದೆ. ಮಕ್ಕಳಲ್ಲಿ ಈ ಸೋಂಕು ಮರಾಣಾಂತಿಕವಾಗುವ ಹಿನ್ನೆಲೆ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಮತ್ತು ಸೋಂಕಿನ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. (ಐಎಎನ್ಎಸ್)
ಇದನ್ನೂ ಓದಿ:ಒಂದೇ ತಿಂಗಳಲ್ಲಿ ಜಾಗತಿಕವಾಗಿ ಶೇ. 52ರಷ್ಟು ಕೋವಿಡ್ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ