ವ್ಯಕ್ತಿತ್ವದ ವಿಚಾರದಲ್ಲಿ ಹಲವು ಬಾರಿ ಬಟ್ಟೆಗಳು ಕೂಡ ಪ್ರಮುಖವಾಗುತ್ತವೆ. ಬಟ್ಟೆಗಳು ದೇಹದ ಅಂದ ಮಾತ್ರವಲ್ಲ, ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ. ಇದೇ ಬಟ್ಟೆಗಳಿಂದ ನಮ್ಮ ಭೂಮಿಯ ರಕ್ಷಣೆಯೂ ಸಾಧ್ಯವಿದೆ. ಸರಿಯಾದ ಬಟ್ಟೆಗಳನ್ನು ಆಯ್ಕೆ ಮಾಡುವ ಮೂಲಕ ನಮ್ಮ ಭೂಮಿಯನ್ನು ಸಂರಕ್ಷಿಸಬಹುದು.
ಚರ್ಮದ ಉತ್ಪನ್ನಗಳ ತೊರೆಯುವಿಕೆ: ಫ್ಯಾಷನ್ ಬಟ್ಟೆಗಳ ವಿಚಾರದಲ್ಲಿ ಪ್ರಾಣಿಗಳ ಚರ್ಮಗಳ ಬಳಕೆಯಾಗುತ್ತಿರುವುದು ಹೊಸ ವಿಚಾರವಲ್ಲ. ಈ ಬಗ್ಗೆ ಈಗಾಗಲೇ ಅನೇಕರು ಧ್ವನಿ ಎತ್ತಿದ್ದಾರೆ. ಕಳೆದ ವರ್ಷ ನಟಿ ಸೋನಾಕ್ಷಿ ಸಿನ್ಹಾ ಪೆಟಾ ಇಂಡಿಯಾ ಜೊತೆ ಕೈ ಜೋಡಿಸಿ, ಬಟ್ಟೆಗಳ ತಯಾರಿಕೆಯಲ್ಲಿ ಬಳಕೆ ಮಾಡುವಂತಹ ಚರ್ಮ (ಲೆದರ್) ತ್ಯಜಿಸುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು. ಇದಕ್ಕೂ ಮೊದಲು ಮಿಲಿಂದ್, ಸೋಮನ್ ಮತ್ತು ಅಂಕಿತಾ ಕೊನ್ವರ್ ಕೂಡ FDCI x Lakme ಅಲ್ಲಿ ಲೆಥರ್ ಫ್ರೀ ಸಸ್ಟೈನಬಲ್ ಫ್ಯಾಶನ್ ವೀಕ್ನಲ್ಲಿ ಹೆಜ್ಜೆ ಹಾಕಿದ್ದರು. 2017ರಲ್ಲಿ ಪ್ರಕಟವಾದ ಫ್ಯಾಶನ್ ಇಂಡಸ್ಟ್ರಿ ಪಲ್ಸ್ ವರದಿಯಲ್ಲಿ ಫ್ಯಾಷನ್ ಶೋದಲ್ಲಿ ಬಳಕೆಯಾಗುತ್ತಿರುವ ಹಸುವಿನ ಚರ್ಮದ ಉತ್ಪನ್ನ ಪರಿಸರದ ಮಾಲಿನ್ಯಕ್ಕೆ ಕಾರಣವಾಗಿದೆ. ಜೊತೆಗೆ, ರೇಷ್ಮೆ ಮತ್ತು ಉಣ್ಣೆ ಕೂಡ ಈ ಪಟ್ಟಿಯಲ್ಲಿ ಸೇರಿದೆ ಎಂದು ತಿಳಿಸಿತ್ತು.
ಚರ್ಮದ ಬಳಕೆಯಿಂದ ಆಗುವ ಪರಿಣಾಮವೇನು?:ಫ್ಯಾಷನ್ಗೆ ಬಳಕೆಯಾಗುವ ಲೆದರ್ ಅನ್ನು ಕೊಳೆಯದಂತೆ ಮಾಡಲು ಅದಕ್ಕೆ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಹಸು, ಎಮ್ಮೆ, ಹಂದಿ, ಆಡು, ಕುರಿ, ಆಸ್ಟ್ರೀಚ್, ಕಾಂಗರೂ, ನಾಯಿ, ಬೆಕ್ಕು, ಮೊಸಳೆ ಮತ್ತಿತ್ತರ ಪ್ರಾಣಿಗಳ ಚರ್ಮವನ್ನು ಫ್ಯಾಷನ್ಗೆ ಬಳಕೆ ಮಾಡಲಾಗುವುದು. ಈ ಪ್ರಾಣಿಗಳ ಚರ್ಮ ಹಾಳಾಗದಂತೆ ದೀರ್ಘಕಾಲ ಉಪಯೋಗಕ್ಕೆ ಬರಲು ಅದಕ್ಕೆ ಸೋಪ್ನಂತಹ ಹಾನಿಕಾರಕಗಳನ್ನು ಬಳಕೆ ಮಾಡುತ್ತಾರೆ. ಇದು ಮಣ್ಣು ಮತ್ತು ಅಂತರ್ಜಲ, ನದಿ ಮತ್ತಿತರ ಜಲಮೂಲಗಳಿಗೆ ಸೇರುವ ಮೂಲಕ ಪರಿಸರ ಮಾಲಿನ್ಯವಾಗುತ್ತದೆ. ಚರ್ಮಗಳ ಉತ್ಪನ್ನಗಳ ಟ್ಯಾನರಿ ಕೆಲಸ ಮಾಡುವವರು ವಿವಿಧ ರಾಸಾಯನಿಕ ಜೊತೆ ಕೆಲಸ ಮಾಡುವುದರಿಂದ ಅವರಿಗೂ ಕ್ಯಾನ್ಸರ್ ತಗಲುವ ಅಪಾಯ ಇರುತ್ತದೆ.
ಇಂತಹ ಟ್ಯಾನರಿ ರಾಸಾಯನಿಕ ಕಾರ್ಯದಿಂದಾಗಿ ದಕ್ಷಿಣ ಭಾರತದ ಪಾಲಾರ್ ನದಿ ಕಲುಷಿತಗೊಂಡಿದ್ದು, ಇದು ಕೊಳಕಾಗಿದೆ ಎಂದು ವರದಿಗಳು ತಿಳಿಸಿದ್ದವು. ಇನ್ನು ಉತ್ತರ ಪ್ರದೇಶದ ಕಾನ್ಫುರ್ ಮತ್ತು ಉನ್ನಾವೊ ಪ್ರದೇಶದಲ್ಲಿ ಈ ರೀತಿಯ ಸುಮಾರು 250 ಚರ್ಮೋದ್ಯಮಗಳಿದ್ದು, ಇದರ ರಾಸಾಯನಿಕಗಳು ನೇರವಾಗಿ ಗಂಗಾ ನದಿ ಸೇರುತ್ತಿದ್ದು ಕಲುಷಿತಗೊಂಡಿದೆ.