ನವದೆಹಲಿ: ನಿತ್ಯ ಅಗತ್ಯ ವಾಕಿಂಗ್ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಗಟ್ಟಿಯಾಗಿ ಕಾಪಾಡಿಕೊಳ್ಳಬಹುದು ಎಂದು ಅಧ್ಯಯನವೊಂದರಿಂದ ದೃಢಪಟ್ಟಿದೆ. ದಿನಕ್ಕೆ ಕನಿಷ್ಠ 3967 ಹೆಜ್ಜೆಗಳನ್ನು ಹಾಕುವುದರಿಂದ ನಿಮ್ಮ ಸಾವಿನ ಅಪಾಯವನ್ನು ಆದಷ್ಟು ಕಡಿಮೆ ಮಾಡಬಹುದು ಅನ್ನುತ್ತಿದೆ ಈ ಅಧ್ಯಯನ.
ನಿತ್ಯ ನೀವು ಕನಿಷ್ಠ 2337 ಹೆಜ್ಜೆಗಳನ್ನು ಹಾಕಿದರೆ ಹೃದಯ ಸಂಬಂಧಿ ಕಾಯಿಲೆಯನ್ನು ಆದಷ್ಟು ಕಡಿಮೆ ಮಾಡಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ. ಈ ಸಂಬಂಧ ಸಂಶೋಧಕರು ಸುಮಾರು 2,26,889 ಜನರ ಮೇಲೆ ಈ ಅಧ್ಯಯನ ನಡೆಸಿ, ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರತಿ ದಿನವೂ ಬಿರುಸಿನ ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂಬುದು ಬಹಿರಂಗ ಕೂಡಾ ಆಗಿದೆ. ವಿವಿಧ 17 ಬಗೆಯ ಪ್ರಯೋಗಗಳನ್ನ ಇವರೆಲ್ಲ ಮೇಲೆ ಮಾಡಿ, ಈ ಅಂಶಗಳನ್ನು ಗುರುತಿಸಲಾಗಿದೆ.
ನೀವು ನಾಲ್ಕು ಸಾವಿರ ಹೆಜ್ಜೆಗಳನ್ನೇ ಹಾಕಬೇಕೆಂದೇನೂ ಇಲ್ಲ. ಜಸ್ಟ್ ಸಾವಿರ ಹೆಜ್ಜೆಗಳನ್ನು ದಿನವೂ ಹಾಕಿದರೆ ಸಾಕು ಶೇ 15 ರಷ್ಟು ಅಪಾಯವನ್ನು ಕಡಿಮೆ ಮಾಡಬಹುದು ಅನ್ನುತ್ತಾರೆ ತಜ್ಞರು. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 500 ರಿಂದ 1,000 ಹೆಜ್ಜೆಗಳನ್ನು ನಡೆಯುವುದರಿಂದ ಹೃದಯ ಕಾಯಿಲೆಗಳಿಂದ ಸಾವಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬ ಅಂಶವನ್ನು ಗಮನಿಸಲಾಗಿದೆ.
500 ಹೆಜ್ಜೆ ನಡುಗೆ ಶೇ 7 ರಷ್ಟು ಮರಣ ಪ್ರಮಾಣ ಕಡಿಮೆ:ದಿನವೊಂದಕ್ಕೆ 1000 ಹೆಜ್ಜೆ ನಡೆಯುವುದರಿಂದ ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಬಹುದು ಎಂಬುದನ್ನು ಈ ಅಧ್ಯಯನ ಖಚಿತ ಪಡಿಸಿದೆ. ಮತ್ತೊಂದೆಡೆ, ನಿತ್ಯ ಕನಿಷ್ಠ 500 ಹೆಜ್ಜೆ ನಡೆಯುವುದರಿಂದ ಹೃದ್ರೋಗದಿಂದ ಉಂಟಾಗುವ ಮರಣವನ್ನು ಶೇಕಡಾ 7 ರಷ್ಟು ಕಡಿಮೆ ಮಾಡಬಹುದು ಅನ್ನುತ್ತೆ ಈ ವರದಿ.
ಯಾವುದೇ ಕಾರಣದಿಂದ ಸಾವುಗಳನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ 4000 ಹೆಜ್ಜೆಗಳಷ್ಟು ನಡೆಯುವುದರಿಂದ ಎಲ್ಲ ರೋಗಗಳಿಂದ ದೂರು ಇರಬಹುದು ಅಂತಾರೆ ಪೋಲೆಂಡ್‌ನ ಲೋಡ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಮಾಸಿಜ್ ಬನಾಚ್. ವಾಕಿಂಗ್ ಮಾಡುವುದು ಪುರುಷರು ಮತ್ತು ಮಹಿಳೆಯಲ್ಲಿ ಸಮಾನ ಪ್ರಭಾವ ಬೀರುತ್ತದೆ ಎನ್ನುತಾರೆ ಅವರು.