ಕರ್ನಾಟಕ

karnataka

ETV Bharat / sukhibhava

ವೃದ್ಧರಲ್ಲಿ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತೆ ವಾಕಿಂಗ್.. - ವೃದ್ಧರಲ್ಲಿ, ವಯಸ್ಸಾದವರಲ್ಲಿ ಮಧುಮೇಹ

ಸುಧಾರಿತ ಆಹಾರದೊಂದಿಗೆ ನಿಯಮಿತ ದೈಹಿಕ ಚಟುವಟಿಕೆಯು, ವಿಶೇಷವಾಗಿ ವಾಕಿಂಗ್​​ ವಯಸ್ಕರಲ್ಲಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಅಧ್ಯಯನವೊಂದು ತಿಳಿಸಿದೆ.

Walking
ವಾಕಿಂಗ್

By

Published : Jan 23, 2022, 6:05 PM IST

ಪ್ರತಿದಿನ ವಾಕಿಂಗ್ ಮಾಡುವುದರಿಂದ 70 ಮತ್ತು 80 ವರ್ಷ ವಯಸ್ಸಾದವರಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಪ್ರತಿ 1,000 ಹೆಜ್ಜೆಗಳು ಶೇ.6ರಷ್ಟು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಈಗಾಗಲೇ ವಾಯುವಿಹಾರದ ಅಭ್ಯಾಸ ಬೆಳೆಸಿಕೊಂಡಿರುವ ವೃದ್ಧರು ಒಂದು ಪಟ್ಟು ಹೆಚ್ಚು ಅಂದರೆ ಪ್ರತಿದಿನ 2,000 ಹೆಜ್ಜೆಗಳನ್ನು ಹಾಕಿದರೆ ಶೇ.12ರಷ್ಟು ಮಧುಮೇಹದ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎಂದು ಅಧ್ಯಯನವೊಂದು ಹೇಳಿದೆ.

ಸಾರ್ವಜನಿಕ ಆರೋಗ್ಯದ ಕುರಿತಾಗಿ ಯುನೈಟೆಡ್​ ಸ್ಟೇಟ್ಸ್​​ನ ಸ್ಯಾನ್ ಡಿಯಾಗೋದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹಾಗೂ ಸ್ಯಾನ್ ಡಿಯಾಗೋ ಸ್ಟೇಟ್ ಯೂನಿವರ್ಸಿಟಿ ಜಂಟಿಯಾಗಿ ನಡೆಸಿದ ಅಧ್ಯಯನ ಇದಾಗಿದೆ.

ಹೆಜ್ಜೆಗಳನ್ನು ಕೌಂಟ್​ ಮಾಡುವ ವೇಗವರ್ಧಕ ಅಳವಡಿಕೆ: 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಋತುಬಂಧ ಅಥವಾ ಮುಟ್ಟು ನಿಂತ ಹಾಗೂ ಮಧುಮೇಹ ಹೊಂದಿರದ ಅಜ್ಜಿಯರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಏಕೆಂದರೆ ಇವರಲ್ಲಿ ದೈಹಿಕ ಚಟುವಟಿಕೆ ಮತ್ತು ಹೃದಯರಕ್ತನಾಳದ ಆರೋಗ್ಯ ಮುಟ್ಟಾಗುವ ಮಹಿಳೆಯರಿಗಿಂತ ಭಿನ್ನವಾಗಿರುತ್ತದೆ. ಅಧ್ಯಯನಕ್ಕೆ ಬಳಸಿಕೊಂಡ ಅಜ್ಜಿಯರಿಗೆ ದಿನಕ್ಕೆ 24 ಗಂಟೆಗಳ ಕಾಲ ಸೊಂಟದ ಬಲಭಾಗದಲ್ಲಿ ಒಂದು ವಾರದವರೆಗೆ ಹೆಜ್ಜೆಗಳನ್ನು ಕೌಂಟ್​ ಮಾಡುವ ವೇಗವರ್ಧಕಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿತ್ತು. ಸತತ 7 ವರ್ಷಗಳವರೆಗೆ ಇದನ್ನು ಅಳೆಯಲಾಯಿತು.

ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಜನರಿಗೆ ದಿನಕ್ಕೆ 10,000 ಹೆಜ್ಜೆಗಳು ನಿಜವಾಗಿಯೂ ಅಗತ್ಯವಿದೆಯೇ? ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸಿದ್ದೇವೆ ಎಂದು ಸ್ಯಾನ್ ಡಿಯಾಗೋದಲ್ಲಿನ ಹರ್ಬರ್ಟ್ ವರ್ಥೀಮ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಆ್ಯಂಡ್ ಹ್ಯೂಮನ್ ಲಾಂಗ್ವಿಟಿ ಸೈನ್ಸ್‌ನಲ್ಲಿ ಎಪಿಡೆಮಿಯಾಲಜಿಯ ಸಹಾಯಕ ಪ್ರಾಧ್ಯಾಪಕರಾದ ಪಿಎಚ್‌ಡಿ, ಎಂಪಿಹೆಚ್, ಹಿರಿಯ ಲೇಖಕ ಜಾನ್ ಬೆಲ್ಲೆಟಿಯರ್ ಹೇಳಿದರು. ಮಧುಮೇಹಕ್ಕೂ ಹಾಗೂ ನಡಿಗೆಗೂ ಇರುವ ಸಂಬಂಧವನ್ನು ತಿಳಿದುಕೊಳ್ಳುವುದು ನಮ್ಮ ಪ್ರಾಥಮಿಕ ಗುರಿಯಾಗಿತ್ತು. ಈ ಅಧ್ಯಯನದಲ್ಲಿ 4,838 ಮಹಿಳೆಯರ ಪೈಕಿ 395 ಅಥವಾ ಕೇವಲ 8 ಪ್ರತಿಶತದಷ್ಟು ಮಂದಿ ಮಾತ್ರ ಮಧುಮೇಹಕ್ಕೆ ತುತ್ತಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಮಕ್ಕಳಲ್ಲಿ ಅಲರ್ಜಿ ನಿಯಂತ್ರಣ ಹೇಗೆ? ಹೀಗಿವೆ ಕೆಲವು ಮಾರ್ಗಗಳು..

65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರು ಸಾಮಾನ್ಯವಾಗಿ ಚಲನಶೀಲತೆಯ ಸವಾಲುಗಳೊಂದಿಗೆ ಬದುಕುತ್ತಾರೆ. ದೈಹಿಕ ಚಟುವಟಿಕೆ ಕಡಿಮೆಯಾದಂತೆ ಟೈಪ್-2 ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಪ್ರತಿ ವರ್ಷ 1.5 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಾರೆ. ಆ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿ ಹಿರಿಯ ನಾಗರಿಕರಾಗಿದ್ದಾರೆ. ಹೀಗಾಗಿ ಪ್ರತಿ ವರ್ಷ ಹೊಸದಾಗಿ 5,00,000 ವಯಸ್ಸಾದ ವ್ಯಕ್ತಿಗಳು ಮಧುಮೇಹಕ್ಕೆ ತುತ್ತಾಗುತ್ತಾರೆ. ಅವರೆಲ್ಲರೂ ದಿನಕ್ಕೆ 2,000 ಹೆಜ್ಜೆಗಳನ್ನು ಹೆಚ್ಚಿಸಿದರೆ ಶೇ.12ರಷ್ಟು ಮಧುಮೇಹದ ಅಪಾಯವನ್ನು ತಡಗಟ್ಟಬಹುದಾಗಿದೆ ಎಂದು ಬೆಲ್ಲೆಟಿಯರ್ ತಿಳಿಸಿದ್ದಾರೆ.

ದೈಹಿಕ ಚಟುವಟಿಕೆಯ ಅಗತ್ಯತೆ: ಒಟ್ಟಾರೆ ಈ ಅಧ್ಯಯನವು ಸುಧಾರಿತ ಆಹಾರದೊಂದಿಗೆ ನಿಯಮಿತ ದೈಹಿಕ ಚಟುವಟಿಕೆಯು ವಯಸ್ಕರಲ್ಲಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ವಾಸ್ತವವಾಗಿ, ಮಧುಮೇಹ ಸೇರಿದಂತೆ ಹಲವಾರು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಆ್ಯಂಡ್ ಹ್ಯೂಮನ್ ಸರ್ವಿಸಸ್ ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ಮತ್ತು ತೀವ್ರವಾದ ದೈಹಿಕ ಚಟುವಟಿಕೆಯನ್ನು ಶಿಫಾರಸು ಮಾಡುತ್ತದೆ.

ದೈಹಿಕ ಚಟುವಟಿಕೆಯ ತೀವ್ರತೆಯ ಮಟ್ಟಗಳಲ್ಲಿ ವಯಸ್ಸು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬೆಲ್ಲೆಟಿಯರ್ ಹೇಳುತ್ತಾರೆ. ವಯಸ್ಸಾದರೂ ಮಧ್ಯಮ-ತೀವ್ರತೆಯ ದೈಹಿಕ ಚಟುವಟಿಕೆ ಮಾಡುವುದಕ್ಕೂ ಯುವಕರು ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಚಲನಶೀಲತೆಯ ಅಸಾಮರ್ಥ್ಯ ಹೊಂದಿರುವ ಜನರು, ಅಥವಾ 80 ವರ್ಷ ಮೇಲ್ಪಟ್ಟ ಜನರು ವಾಯುವಿಹಾರವನ್ನೇ ಮಾಡಬೇಕಿಲ್ಲ. ಮನೆಯೊಳಗೇ ಕೋಣೆಯಿಂದ ಕೋಣೆಗೆ ನಡೆದಾಡುವುದು, ಮನೆ ಅಂಗಳದಲ್ಲಿ ವಾಕಿಂಗ್​ ಮಾಡಿದರೂ ಸಾಕು. ಹಾಗೆಯೇ ಆರೋಗ್ಯವಾಗಿರುವವರು ವಾರಕ್ಕೊಮ್ಮೆ ವಾಯುವಿಹಾರಕ್ಕೆ ಹೋದರೆ ಸಾಕಾಗುವುದಿಲ್ಲ, ಇದು ಇವರ ದಿನನಿತ್ಯದ ಭಾಗವಾಗಿರಬೇಕು ಎನ್ನುತ್ತಾರೆ ಬೆಲ್ಲೆಟಿಯರ್.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details