ವಿಟಮಿನ್ ಇ ದೇಹದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ಚರ್ಮ ಮತ್ತು ಕೂದಲಿನ ಆರೈಕೆಯಲ್ಲಿ ಇದು ಪ್ರಮುಖ ಪಾತ್ರವನ್ನುವಹಿಸುತ್ತದೆ. ಹಾಗಾಂತ ವಿಪರೀತ ಪ್ರಮಾಣದಲ್ಲಿ ವಿಟಮಿನ್ ಇ ಸೇವನೆ ಮಾಡುವುದು ಕೂಡ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು. ಹಾಗಾದ್ರೆ ಈ ವಿಟಮಿನ್ ಇ ಯಿಂದ ಯಾವ ರೀತಿ ಪ್ರಯೋಜನವಿದೆ, ಇದರ ಅಡ್ಡ ಪರಿಣಾಮ ಏನು, ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಇದರ ಸೇವನೆ ಅಗತ್ಯ ಎಂಬ ಮಾಹಿತಿ ಇಲ್ಲಿದೆ.
ವಿಟಮಿನ್ ಇ ಆರೋಗ್ಯ ಪ್ರಯೋಜನಗಳು: ಪ್ರಸ್ತುತ ಹವಾಮಾನ ಬದಲಾವಣೆಯಲ್ಲಿ ಅನೇಕ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಮಾಲಿನ್ಯವೂ ವಿಪರೀತ ಪ್ರಮಾಣದಲ್ಲಿ ಏರಿಕೆ ಕಂಡಿದೆ. ದಿನದಿಂದ ದಿನಕ್ಕೆ ತಾಪಮಾನ ಕೂಡ ಹೆಚ್ಚಾಗುತ್ತಿದೆ. ಜನರ ಜೀವನಶೈಲಿ ಕೂಡ ಬದಲಾಗುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೂದಲು ಮತ್ತು ತ್ವಚೆ ಇದರಿಂದ ಹಾನಿಗೆ ಒಳಗಾಗುತ್ತದೆ. ಈ ಹಿನ್ನಲೆಯಲ್ಲಿ ವಿಟಮಿನ್ ಇಯನ್ನು ವೈದ್ಯಕೀಯ ಸಲಹೆ ಮೇರೆಗೆ ಸೇವಿಸುವುದು ಉತ್ತಮ ಎನ್ನುತ್ತಾರೆ.
ತ್ವಚೆ ಮೇಲಿನ ಪ್ರಯೋಜನ: ವಿಟಮಿನ್ ಇ ಚರ್ಮವನ್ನು ಆರೋಗ್ಯವಾಗಿ ಇರಿಸುತ್ತದೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಇದೇ ಕಾರಣಕ್ಕೆ ವಿಟಮಿನ್ ಇ ಅನ್ನು ಅನೇಕ ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುವುದು. ವೈದ್ಯಕೀಯ ತಜ್ಞರು ಹೇಳುವಂತೆ, ನಿಯಮಿತವಾಗಿ ವಿಟಮಿನ್ ಇ ಪಡೆಯುವುದರಿಂದ ತ್ವಚೆಯು ಮೃದುವಾಗಿಸುತ್ತದೆ. ನೆರಿಗೆ ಮತ್ತು ಕಲೆಗಳಿಂದ ಉಂಟಾಗುವ ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಅದೇ ರೀತಿ ವಿಟಮಿನ್ ಇ ಚರ್ಮದ ಊರಿಯೂತ ಮತ್ತು ಕಿರಿಕಿರಿಯನ್ನು ತಪ್ಪಿಸುತ್ತದೆ.
ಕೂದಲಿಗೆ ಪ್ರಯೋಜನಕಾರಿ: ವಿಟಮಿನ್ ಇ ಕೂದಲಿನ ಬೆಳವಣಿಗೆಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಕೂದಲಿಗೆ ಆಮ್ಲಜನಕ ನೀಡುವುದರ ಜೊತೆಗೆ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಇದು ತಲೆಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕೂದಲ ಬುಡದಲ್ಲಿ ಉಂಟಾಗುವ ಊರಿಯುತವನ್ನು ತಪ್ಪಿಸುತ್ತದೆ. ಕೂದಲು ಶುಷ್ಕವಾಗುವುದನ್ನು ತಪ್ಪಿಸಿ, ಕೂದಲ ಬಲಶಾಲಿಯಾಗಿ ಮಾಡುವ ಜೊತೆಗೆ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ವಿಟಮಿನ್ ಇ ಯಥೇಚ್ಛವಾಗಿರುವ ಆಹಾರಗಳಿವು: ಬೀಜಗಳು, ಹ್ಯಾಜೆಲ್ನಟ್, ಕಡಲೆ ಬೀಜ, ಪೈನ್ ನಟ್, ಬಾದಾಮಿಯಲ್ಲಿ ವಿಟಮಿನ್ ಇ ಹೆಚ್ಚಿರುತ್ತದೆ. ಕೆಲವು ಆರೋಗ್ಯ ತಜ್ಞರು ಹೇಳುವಂತೆ ಎಣ್ಣೆ, ಪಾಲಕ್, ಮಾವಿನ ಹಣ್ಣು, ಪಪ್ಪಾಯ, ಕಿವಿ ಹಣ್ಣು, ಬ್ರೌನ್ ರೈಸ್ ಮತ್ತು ಬಾರ್ಲಿಯಲ್ಲಿ ಕೂಡ ವಿಟಮಿನ್ ಇ ಹೆಚ್ಚಾಗಿರುತ್ತದೆ.