ವಿಟಮಿನ್ ಡಿ ಒಂದು ಪ್ರಮುಖ ಪೋಷಕಾಂಶವಾಗಿದ್ದು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲವಾಗಿ, ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಸೂರ್ಯನ ಕಿರಣ 'ವಿಟಮಿನ್ ಡಿ' ಯ ಪ್ರಮುಖ ಮೂಲ. ಬಿಸಿಲಿಗೆ ಮೈಯೊಡ್ಡಿದರೆ ಸಾಕು, ಬೇಕಾದಷ್ಟು ವಿಟಮಿನ್ ಡಿ ನಿಮಗೆ ಸಿಗುತ್ತದೆ. ಇಷ್ಟಾದರೂ ಬಹುತೇಕರು ಇದರ ಕೊರತೆಯಿಂದ ಬಳಲುತ್ತಿದ್ದಾರೆ. ವಿಟಮಿನ್ ಡಿ ಕಡಿಮೆಯಾದಷ್ಟೂ ಅಕಾಲಿಕ ಮರಣದ ಅಪಾಯ ಹೆಚ್ಚಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿದೆ.
ದೇಹದಲ್ಲಿ ವಿಟಮಿನ್ ಡಿ ಕೊರತೆಯನ್ನು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಲಾಗಿದ್ದರೂ ಇದು ಪ್ರಪಂಚದಾದ್ಯಂತ ಎಲ್ಲಾ ವಯಸ್ಸಿನ ಜನರಲ್ಲಿ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಹಾರ ಕ್ರಮ, ಜೀವನಶೈಲಿ ಬದಲಾವಣೆ ಮತ್ತು ಇತರೆ ಕಾರಣಗಳಿಂದಾಗಿ, ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಜನರಲ್ಲಿ ಇತರೆ ಸಮಸ್ಯೆಗಳ ಉದ್ಭವಕ್ಕೆ ಪ್ರಚೋದಿಸುತ್ತದೆ. ಕೋವಿಡ್ -19 ಸೋಂಕು ಈ ಪ್ರಕರಣಗಳನ್ನು ಹೆಚ್ಚಿಸಿದೆ. ಇನ್ನೂ ವಿಟಮಿನ್ ಡಿ ಕಡಿಮೆ ಇರುವವರಿಗೆ ಕೋವಿಡ್ ಬೇಗ ತಗುಲಿದೆ. ಮತ್ತು ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ರೋಗಗಳು, ಸಮಸ್ಯೆಗಳು ಇನ್ನಷ್ಟು ಹೆಚ್ಚಿವೆ. ಸಂಶೋಧನೆಯ ಪ್ರಕಾರ, ಕೋವಿಡ್-19ರ ಅಡ್ಡ ಪರಿಣಾಮವಾಗಿ ವಿಟಮಿನ್ ಡಿ ಕೊರತೆಯು ಪ್ರಮುಖವಾಗಿ ಕಂಡುಬರುತ್ತದೆ ಎಂದು ದೃಢಪಡಿಸಲಾಗಿದೆ.
ಸಾಮಾನ್ಯವಾಗಿ, ಮೂಳೆಗಳನ್ನು ಆರೋಗ್ಯವಾಗಿಡಲು ವಿಟಮಿನ್ ಡಿ ದೇಹಕ್ಕೆ ಅತ್ಯಗತ್ಯ ಎಂದು ಜನರು ಭಾವಿಸುತ್ತಾರೆ. ಹೌದು, ಮೂಳೆಗಳನ್ನು ಆರೋಗ್ಯಕರವಾಗಿಡುವಲ್ಲಿ ಇದು ನಿಜವಾಗಿಯೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದರೆ ವಿಟಮಿನ್ ಡಿ ಯ ಅಗತ್ಯತೆ ಮತ್ತು ಪ್ರಯೋಜನಗಳು ಕೇವಲ ಮೂಳೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದರ ಹೊರತಾಗಿ, ದೇಹದ ಬೆಳವಣಿಗೆ, ರೋಗಗಳಿಂದ ರಕ್ಷಣೆ ಮತ್ತು ಅನೇಕ ದೈಹಿಕ ವ್ಯವಸ್ಥೆಗಳ ಸುಗಮ ಕಾರ್ಯನಿರ್ವಹಣೆಗೆ ಸರಿಯಾದ ಪ್ರಮಾಣದ ವಿಟಮಿನ್ ಡಿ ಅನ್ನು ಹೊಂದಿರುವುದು ಬಹಳ ಮುಖ್ಯ. ಅದರೆ ದೇಹದಲ್ಲಿ ಈ ಪೋಷಕಾಂಶ ಕೊರತೆಯಾದರೆ ದೈಹಿಕವಾಗಿ ಮಾತ್ರವಲ್ಲದೇ ಅನೇಕ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧನೆ ತಿಳಿಸಿದೆ.
ವಿಟಮಿನ್ ಡಿ ಯ ಭಾಗಶಃ ಕೊರತೆಯು ಎಲ್ಲಾ ವಯಸ್ಸಿನ ಜನರಲ್ಲಿ ಬಹಳ ಸಾಮಾನ್ಯವಾದ ಸಮಸ್ಯೆಯಾಗಿದ್ದರೂ ಕೂಡ ಒಂದು ವೇಳೆ ಈ ಕೊರತೆಯು ಹೆಚ್ಚಾದರೆ ಇದು ಅನೇಕ ರೋಗಗಳಿಗೆ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ಹೆಚ್ಚಿನ ಸಂಖ್ಯೆ ಜನರಲ್ಲಿ ವಿಟಮಿನ್ ಡಿ ಕೊರತೆ ಪ್ರಕರಣಗಳು ಪತ್ತೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಕೋವಿಡ್ ಸೋಂಕಿನಿಂದ ಬಳಲಿದ, ಸದ್ಯ ಬಳಲುತ್ತಿರುವ ಜನರಲ್ಲಿ ವಿಟಮಿನ್ ಡಿ ತೀವ್ರ ಕೊರತೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
2020ರಲ್ಲಿ, ಷಿಕಾಗೊ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯಲ್ಲಿ ಒದಗಿಸಿದ ಮಾಹಿತಿಯ ಪ್ರಕಾರ, ವಿಟಮಿನ್ ಡಿ ಕೊರತೆಯಿರುವ ಸುಮಾರು ಶೇ. 20ರಷ್ಟು ಜನರಲ್ಲಿ ಕೋವಿಡ್ ಪತ್ತೆಯಾಗಿದೆ. ದೇಹದಲ್ಲಿನ ವಿಟಮಿನ್ ಡಿ ಕೊರತೆಯು ಜನರು ಕೊರೊನಾ ಸೋಂಕಿಗೆ ಗುರಿಯಾಗಲು ಕಾರಣವಾಗಬಹುದು ಎಂದು ಮತ್ತೊಂದು ಸಂಶೋಧನೆಯಲ್ಲಿ ದೃಢಪಡಿಸಲಾಗಿದೆ.
ಕೆಲ ಮಾಹಿತಿಯ ಪ್ರಕಾರ, ಕೋವಿಡ್ ಅವಧಿಯ ಮೊದಲು ಸುಮಾರು 40 ಪ್ರತಿಶತದಷ್ಟು ವಿಟಮಿನ್ ಡಿ ಕೊರತೆಯ ಪ್ರಕರಣಗಳು ಜನರಲ್ಲಿ ವರದಿಯಾಗುತ್ತಿದ್ದವು. ಈಗ ಈ ಸಂಖ್ಯೆಯು ಶೇ.90ಕ್ಕಿಂತ ಹೆಚ್ಚಾಗಿದೆ. ದೇಹದಲ್ಲಿ ವಿಟಮಿನ್ ಡಿ ಯ ಅತಿಯಾದ ಕೊರತೆಯು ಕೋವಿಡ್ -19 ಸೋಂಕು ಬೇಗ ವಕ್ಕರಿಸಲು ಕಾರಣವಾಗಿದೆ.