ವಾಷಿಂಗ್ಟನ್: ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ (ಎಫ್ಡಿಎ) ಹೊಸ ಕೋವಿಡ್ ಲಸಿಕೆಗೆ ಅನುಮತಿಸಿದೆ. ಕೋವಿಡ್ನ ಹೊಸ ರೂಪಾಂತಗಳನ್ನು ಗುರಿಯಾಗಿಸಿ ಈ ಲಸಿಕೆಯನ್ನು ಫೈಜರ್ ಮತ್ತು ಮೊರ್ಡನಾ ಕಂಪನಿ ಅಭಿವೃದ್ಧಿಪಡಿಸಿದೆ.
ಈ ಲಸಿಕೆಯು ಎಕ್ಬಿಬಿ 1.5 ತಳಿಯನ್ನು ಗುರಿಯಾಗಿಸಿಕೊಂಡಿದೆ. ಪ್ರಸ್ತುತ ಈ ತಳಿ ಅಮೆರಿಕನ್ನರನ್ನು ಹೆಚ್ಚಾಗಿ ಕಾಡುತ್ತಿದೆ. ಇದರ ವಿರುದ್ಧ ಹೊಸ ಲಸಿಕೆಯನ್ನು ತಯಾರಿಸುವ ಜವಾಬ್ದಾರಿಯನ್ನು ಉತ್ಪಾದಕರಿಗೆ ನೀಡಲಾಗಿತ್ತು. ಇವು ಮೊನೊವಲೆಂಟ್ ಆಗಿದ್ದು, ಈ ಹಿಂದಿನ ಬೂಸ್ಟರ್ ಲಸಿಕೆಗಳಿಗಿಂತ ವಿಭಿನ್ನ. ಮೂರು ವರ್ಷದ ಹಿಂದೆ ಸೋಂಕಿಗೆ ಕಾರಣವಾದ ಮೂಲ ವೈರಸ್ನ ವಿರುದ್ಧದ ರಕ್ಷಣೆ ಹೊಂದಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ, ಹೊಸ ಲಸಿಕೆಯನ್ನು ಯಾರು ಪಡೆಯಬೇಕು ಎಂಬ ಕುರಿತು ಸಲಹಾ ಸಭೆ ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕ ಸಿಡಿಸಿ ನಿರ್ದೇಶಕರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆ ಬಳಿಕ ದೇಶಾದ್ಯಂತ ಲಸಿಕೆಗಳು ಔಷಧಾಲಯ, ಕ್ಲಿನಿಕ್ ಮತ್ತು ಆರೋಗ್ಯ ವಲಯಕ್ಕೆ ಕೆಲವೇ ದಿನಗಳಲ್ಲಿ ತಲುಪಲಿವೆ ಎಂದು ಮಾಧ್ಯಮ ವರದಿ ಮಾಡಿದೆ.
ಕೋವಿಡ್ ಪ್ರಸ್ತುತ ಅಮೆರಿಕದಲ್ಲಿ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ. ಇದು ದುರ್ಬಲ ವರ್ಗದ ಜನಸಂಖ್ಯೆಯ ಮೇಲೆ ಗಮನಾರ್ಹ ಅಪಾಯ ಹೊಂದಿದೆ. ಅದರಲ್ಲೂ ಉಸಿರಾಟದ ವೈರಸ್ ಋತುಮಾನದಲ್ಲಿ ಇದರ ಪ್ರವೇಶ ಗರಿಷ್ಠ. ಈ ಋತುವಿನಲ್ಲಿ ಜನರನ್ನು ರಕ್ಷಿಸಲು ನವೀಕರಿಸಿದ ಲಸಿಕೆಗಳು ನಿರ್ಣಾಯಕ ಎಂದು ಮಾಡರ್ನಾ ಕಂಪನಿಯ ಸಿಇಒ ಸ್ಟೇಫನ್ ಬನ್ಸೆಲ್ ತಿಳಿಸಿದ್ದಾರೆ.