ವಾಷಿಂಗ್ಟನ್( ಅಮೆರಿಕ) : ಚಿಕೂನ್ಗುನ್ಯಾದ ವಿರುದ್ಧ ಹೋರಾಡಲು ಸಿದ್ದಪಡಿಸಿರುವ ವಿಶ್ವದ ಮೊದಲ ಲಸಿಕೆಗೆ ಅಮೆರಿಕದ ಫುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ ಅನುಮತಿ ನೀಡಿದೆ. ಇಕ್ಸ್ಚಿಕ್ ಎಂಬ ಹೆಸರಿನ ಈ ಲಸಿಕೆಯನ್ನು ಫ್ರೆಂಚ್ ಬಯೋಟೆಕ್ ಕಂಪನಿ ವಲ್ನೆವ ಅಭಿವೃದ್ಧಿ ಪಡಿಸಿದೆ. 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಚಿಕೂನ್ಗುನ್ಯಾ ಅಪಾಯ ಎದುರಿಸುತ್ತಿರುವವರು ಈ ಲಸಿಕೆ ಪಡೆಯಬಹುದಾಗಿದೆ.
ಇಕ್ಸ್ಚಿಕ್ ಸಿಂಗಲ್ ಡೋಸ್ ಲಸಿಕೆ ಆಗಿದ್ದು, ಸ್ನಾಯುಗೆ ನೀಡಲಾಗುವುದು. ಇದು ಜೀವಂತ, ಚಿಕೂನ್ಗುನ್ಯಾ ವೈರಸ್ನ ದುರ್ಬಲ ಆವೃತ್ತಿಯನ್ನು ಹೊಂದಿರುತ್ತದೆ. ಚಿಕೂನ್ಗುನ್ಯಾ ವೈರಸ್ ಪ್ರಾಥಮಿಕವಾಗಿ ಸೋಂಕು ಪೀಡಿತ ಸೊಳ್ಳೆ ಕಚ್ಚುವಿಕೆಯಿಂದ ಜನರಿಗೆ ವರ್ಗಾವಣೆ ಆಗುತ್ತದೆ. ಚಿಕೂನ್ಗುನ್ಯಾ ಪ್ರಕರಣಗಳು ಜಾಗತಿಕ ಆರೋಗ್ಯ ಬೆದರಿಕೆ ಒಡ್ಡುತ್ತಿದೆ. ಕಳೆದ 15 ವರ್ಷಗಳಿಂದ 5 ಮಿಲಿಯನ್ ಚಿಕೂನ್ಗುನ್ಯಾ ಪ್ರಕರಣಗಳು ಜಾಗತಿಕವಾಗಿ ವರದಿಯಾಗಿದೆ.
ಚಿಕೂನ್ಗುನ್ಯಾ ವೈರಸ್ ಸೋಂಕು ಅನೇಕ ಗಂಭೀರ ಸಮಸ್ಯೆ ಮತ್ತು ದೀರ್ಘಾವಧಿ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲೂ ವಯಸ್ಕರಲ್ಲಿ ಇದು ವೈದ್ಯಕೀಯ ಪರಿಸ್ಥಿತಿಯನ್ನುಂಟು ಮಾಡಬಹುದು ಎಂದು ಎಫ್ಡಿಎ ಸೆಂಟರ್ ಫಾರ್ ಬಯೋಲಾಜಿಕಲ್ ಎವಲೂಷನ್ ಅಂಡ್ ರಿಸರ್ಚ್ನ ನಿರ್ದೇಶಕ ಪೀಟರ್ ಮಾರ್ಕ್ಸ್ ತಿಳಿಸಿದ್ದಾರೆ.
ಈ ಲಸಿಕೆಯು ವೈದ್ಯಕೀಯ ಅಗತ್ಯವನ್ನು ತಿಳಿಸುವುದರ ಜೊತೆಗೆ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖವಾಗಲಿದೆ ಎಂದಿದ್ದಾರೆ. ಇಕ್ಸಚಿಕ್ನ ಸುರಕ್ಷತೆಯನ್ನು ಎರಡು ಕ್ಲಿನಿಕಲ್ ಅಧ್ಯಯನ ಮೂಲಕ ಪೂರ್ಣಗೊಳಿಸಲಾಗಿದೆ. ಉತ್ತರ ಅಮೆರಿಕದಲ್ಲಿ 18 ವರ್ಷ ಮತ್ತು ಮೆಲ್ಪಟ್ಟ 3500 ರೋಗಿಗಳಿಗೆ ಲಸಿಕೆ ಮಾಡಲಾಗಿದೆ. ಇದರ ಜೊತೆಗೆ ಪ್ಲಾಸೆಬೊ ಪಡೆದ 1000 ಭಾಗಿದಾರರನ್ನು ಅಧ್ಯಯನ ಒಳಗೊಂಡಿದೆ. ಲಸಿಕೆಯ ಸಾಮಾನ್ಯ ಅಡ್ಡ ಪರಿಣಾಮಗಳು ತಲೆ ನೋವು, ಆಯಾಸ, ಸ್ನಾಯು ನೋವು, ಕೀಲು ನೋವು, ಜ್ವರ ಒಳಗೊಂಡಿದೆ.