ಲಕ್ನೋ: ಡಿಸ್ಲೆಕ್ಸಿಯಾ ಎಂಬುದು ಮಗುವಿನ ಕಲಿಕೆಯಲ್ಲಿ ಎದುರಾಗುವ ಸಮಸ್ಯೆ. ಆರಂಭಿಕ ಹಂತದ ಕಲಿಕೆಯ ಸಂದರ್ಭದಲ್ಲಿ ಮಾತು, ಬರವಣಿಗೆ, ಗ್ರಹಿಕೆಯಲ್ಲಿ ಈ ಬಾಧೆ ಉಂಟಾಗುತ್ತದೆ. ಹಾಗಂತ ಇದು ಯಾವುದೇ ಗಂಭೀರ ರೋಗವಲ್ಲ, ನಿರ್ವಹಿಸಬಹುದಾದ ಸಮಸ್ಯೆ. ಇದರ ಪತ್ತೆ ಮತ್ತು ಕಲಿಕೆಗೆ ಸಹಾಯವಾಗಲು ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ಟಿಟೌಲಿ ಗ್ರಾಮದ ಸರ್ಕಾರಿ ಶಿಕ್ಷಕಿ ಅಲ್ಫಾ ನಿಗ್ಮಾ ವಿನೂತನ ಸಾಧನ ಕಂಡುಹಿಡಿದಿದ್ದಾರೆ. ಇದು ಮಕ್ಕಳಲ್ಲಿ ಶಬ್ಧಗಳ ಉಚ್ಛಾರಣೆ, ಬರೆಯುವಿಕೆ ಮತ್ತು ಓದುವಿಕೆಗೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಆಲ್ಫಾ ಅವರು ರೊಚೆಸ್ಟರ್ ಯೂನಿವರ್ಸಿಟಿಯಲ್ಲಿ ಫುಲ್ಬ್ರೈಟ್ ಫೆಲೋಶಿಪ್ ಪೂರ್ಣಗೊಳಿಸಿದ್ದಾರೆ. ಅನ್ಲಾಕಿಂಗ್ ಲಿಟ್ರಸಿ ಎಂಬ ಈ ಸಾಧನ ಕಷ್ಟದ ಓದುವಿಕೆ, ಗ್ರಹಿಕೆ, ಧ್ವನಿ ಉಚ್ಛಾರಣೆ ಹಾಗು ಅರಿವಿನಂತಹ 11 ಸಾಕ್ಷರತೆಯ ಕ್ಷೇತ್ರಗಳ ಮೇಲೆ ಓದುವ ಕೌಶಲ್ಯಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುತ್ತದೆ.
ಭಾರತದಲ್ಲಿ ಶೇ.10-15ರಷ್ಟು ಮಕ್ಕಳು ಡಿಸ್ಲೆಕ್ಸಿಯಾ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. 2 ಮತ್ತು 5ನೇ ತರಗತಿಯೊಳಗೆ ನಾವು ಈ ಸಮಸ್ಯೆಯನ್ನು ಪತ್ತೆ ಮಾಡಿದ್ದಲ್ಲಿ, ಸೂಕ್ತ ಸಮಯದಲ್ಲಿ ಮಧ್ಯಸ್ಥಿಕೆವಹಿಸಿದ್ದಲ್ಲಿ ಇದು ಭವಿಷ್ಯದಲ್ಲಿನ ಕಲಿಕೆ ಮತ್ತು ಸಾಮಾಜಿಕ ತೊಂದರೆಯಲ್ಲಿ ಉಂಟಾಗುವ ತೊಡಕು ನಿವಾರಿಸಬಹುದು. ಅಲ್ಫಾ ಅವರು ಇದಕ್ಕಾಗಿ ಈಗಾಗಲೇ ಭಾಷಾ ಪ್ರಯೋಗಾಲಯವನ್ನು ನಿರ್ಮಿಸಿದ್ದಾರೆ. ಗ್ರಾಮೀಣ ಮಕ್ಕಳು ಡಿಸ್ಲೆಕ್ಸಿಯಾ ಸಮಸ್ಯೆ ಹೊಂದಿದ್ದಾರೆ ಎಂಬುದನ್ನು ಇವರು ಸಂಶೋಧನೆ ನಡೆಸಿದ್ದಾರೆ.
"ದೇಶದಲ್ಲಿ ಡಿಸ್ಲೆಕ್ಸಿಯಾ ಚಿಕಿತ್ಸೆ ವೆಚ್ಚದಾಯಕ. ನಮ್ಮ ಈ ಸಾಧನ ಶಿಕ್ಷಕರಿಗೆ ಮಕ್ಕಳನ್ನು ಪ್ರಶ್ನೆಗಳು ಮತ್ತು ಅದರ ಸ್ಕೋರ್ ಮೂಲಕ ವಿಶ್ಲೇಷಣೆ ಮಾಡಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ. ಈ ಸಾಧನ ಅಭಿವೃದ್ಧಿಗೆ ರಾಜಸ್ಥಾನದ ಸರ್ಕಾರಿ ಶಿಕ್ಷಕರಾಗಿರುವ ಇಮ್ರಾನ್ ಖಾನ್ ನೆರವಾಗಿದ್ದಾರೆ ಎಂದು ಆಕೆ ತಿಳಿಸಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಡಿಸ್ಲೆಕ್ಸಿಯಾ.. ಇದು ಕಲಿಕೆಯಲ್ಲಿನ ಅಸ್ವಸ್ಥತೆ ಅಷ್ಟೇ, ಅನಾರೋಗ್ಯವಲ್ಲ!!