ಇತ್ತೀಚಿನ ದಿನಗಳಲ್ಲಿ ಪಿಸಿಒಎಸ್ ಸಮಸ್ಯೆ ಹೆಣ್ಣುಮಕ್ಕಳಲ್ಲಿ ಕಂಡು ಬರುವ ಒಂದು ಸಾಮಾನ್ಯ ಸಮಸ್ಯೆಯಾಗಿ ಗೋಚರವಾಗುತ್ತಿದೆ. ಇದು ಮಹಿಳೆಯರ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ ನೋಡಿ,
ಪಿಸಿಒಎಸ್ ಅಥವಾ " ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ " ಒಂದು ಸಾಮಾನ್ಯವಾದ ಎಂಡೋಕ್ರೈನ್ ಅಸ್ವಸ್ಥತೆಯಾಗಿದ್ದು, ಮಹಿಳೆಯರ ಹಾರ್ಮೋನಿನ ಮಟ್ಟಗಳಿಗೆ ಪರಿಣಾಮ ಬೀರಿ ಆಕೆಯ ಅಂಡಾಶಯಗಳ ಕಾರ್ಯ ಚಟುವಟಿಕೆಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ಪಿಸಿಓಎಸ್ ಸಮಸ್ಯೆ ಮಹಿಳೆಯರ ದೇಹದಲ್ಲಿ ಪುರುಷರಿಗೆ ಸಂಬಂಧಪಟ್ಟ ಹಾರ್ಮೋನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವಂತೆ ಮಾಡುತ್ತದೆ. ಜೊತೆಗೆ ತಲೆ ಕೂದಲು, ಚರ್ಮ, ಋತುಚಕ್ರ ಮೇಲೆ ಪ್ರಭಾವ ಬೀರುತ್ತದೆ.
ಪಿಸಿಒಎಸ್ ಲಕ್ಷಣಗಳು:
ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಯುಕೆ ಹೇಳಿರುವಂತೆ ಪಿಸಿಒಎಸ್‌ನ ಕೆಲವು ಲಕ್ಷಣಗಳು ಇಲ್ಲಿವೆ:
- ದೇಹದ ತೂಕ ಅನಿರೀಕ್ಷಿತವಾಗಿ ಏರಿಕೆಯಾಗುವುದು
- ಹಾರ್ಮೋನ್‌ಗಳ ವ್ಯತ್ಯಾಸದಿಂದ ಮುಖದಲ್ಲಿ ಮೊಡವೆಗಳು ಮೂಡಿ ಬರುವುದು
- ಅನಿಯಮಿತ ಮತ್ತು ನೋವುಳ್ಳ ಋತುಚಕ್ರ
- ಗರ್ಭ ಧರಿಸಲು ಸಮಸ್ಯೆಯಾಗುತ್ತಿರುವುದು
- ಮುಖ, ಎದೆ, ಬೆನ್ನು ಮೇಲೆ ಅತಿಯಾದ ಕೂದಲು ಬೆಳೆಯುವುದು
- ತಲೆ ಕೂದಲು ಉದುರುವುದು
ಇದಕ್ಕೆ ಕಾರಣವೇನು?
ಪಿಸಿಒಎಸ್ಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ, ಆದರೆ, ತಜ್ಞರು ಇದು ಆನುವಂಶಿಕವಾಗಿರಬಹುದು ಎಂದು ಸೂಚಿಸಿದ್ದಾರೆ. ಜೊತೆಗೆ ಹಾರ್ಮೋನ್ಗಳಲ್ಲಿ ಬದಲಾವಣೆಯಾದಾಗ ಈ ರೀತಿಯಾ ಸಮಸ್ಯೆ ಉಂಟಾಗುತ್ತದೆ. ಹಾರ್ಮೋನುಗಳಲ್ಲಾಗುವ ಅಸಮತೋಲನ ಇದರ ಲಕ್ಷಣ. ಆಂಡ್ರೋಜನ್ಸ್ ಅಥವಾ ಪುರುಷ ಹಾರ್ಮೋನುಗಳು ಅತ್ಯಧಿಕ ಮಟ್ಟಗಳಲ್ಲಿ ಇದ್ದು, ಅಂಡಾಶಯಗಳಲ್ಲಿ ಸಣ್ಣ ಸಣ್ಣ ಗುಳ್ಳೆ (ಸಿಸ್ಟ್) ಗಳು ಏರ್ಪಡುತ್ತವೆ. ಇದರಿಂದ ಅಸಮರ್ಪಕ ಋತುಸ್ರಾವ, ಗರ್ಭಪಾತ ಅಥವಾ ಮಕ್ಕಳಾಗಲು ಸಮಸ್ಯೆಯಾಗುವುದು, ಮೊಡವೆಗಳು, ಅನಗತ್ಯ ಕೂದಲು ಬೆಳವಣಿಗೆ, ಸ್ಥೂಲಕಾಯ, ಅಂಡಾಶಯದಲ್ಲಿ ಗುಳ್ಳೆಗಳು ಇತ್ಯಾದಿ ಸಮಸ್ಯೆಗಳಾಗುತ್ತದೆ.