ನವದೆಹಲಿ:ಜಾಗತಿಕವಾಗಿ ಅದ್ರಲ್ಲೂ ವಿಶೇಷವಾಗಿ ಭಾರತೀಯ ಯುವ ಜನತೆಯಲ್ಲಿ ಟೈಪ್ 2 ಮಧುಮೇಹಕ್ಕೆ ಪ್ರಮುಖ ಕಾರಣ ಶೂನ್ಯ ವ್ಯಾಯಾಮ ಮತ್ತು ಜಂಕ್ ಆಹಾರಗಳ ಸೇವನೆ. ಕಳೆದ 10 ವರ್ಷಗಳಿಂದ ಯುವಜನರಲ್ಲಿ ಬದಲಾದ ಜೀವನ ಶೈಲಿಯು ಮಧುಮೇಹದ ಉಲ್ಬಣಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನವೆಂಬರ್ 14ರಂದು ವಿಶ್ವ ಮಧುಮೇಹ ದಿನಾಚರಿಸಲಾಗುವುದು. ಈ ದಿನದಂದು ರಕ್ತದ ಸಕ್ಕರೆ ಮಟ್ಟದ ಹೆಚ್ಚುವಿಕೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯುತ್ತದೆ. ಇತ್ತೀಚಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಇಂಡಿಯಾ ಡಯಾಬಿಟೀಸ್ (ಐಸಿಎಂಆರ್-ಐಎನ್ಡಿಐಎಬಿ) ಅಧ್ಯಯನದಲ್ಲಿ 10ನೇ ಒಂದು ಭಾಗದಷ್ಟು ಭಾರತೀಯರು ಮಧುಮೇಹ ಹೊಂದಿರುವುದಾಗಿ ತಿಳಿದುಬಂದಿದೆ. ಭಾರತದಲ್ಲಿ 101 ಮಿಲಿಯನ್ ಮಂದಿ ಮಧುಮೇಹದಿಂದ ಬಳಲುತ್ತಿದ್ದು, 136 ಮಿಲಿಯನ್ ಮಂದಿ ಪೂರ್ವ ಮಧುಮೇಹ ಹೊಂದಿದ್ದಾರೆ. ಈ ದೀರ್ಘಕಾಲದ ಆರೋಗ್ಯ ಸವಾಲಿನ ಸಮಸ್ಯೆಯು ಹೃದಯ ರಕ್ತನಾಳ ವ್ಯವಸ್ಥೆ, ಕಿಡ್ನಿ ಮತ್ತು ಇತರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಟೈಪ್ 2 ಮಧುಮೇಹದ ಲಕ್ಷಣಗಳು: ಪದೆ ಪದೇ ಮೂತ್ರ ವಿಸರ್ಜನೆ, ಬಾಯಾರಿಕೆ, ಅಧಿಕ ಹಸಿವು, ಅನಿರೀಕ್ಷಿತ ತೂಕ ನಷ್ಟ, ದೀರ್ಘ ಆಲಸ್ಯ, ಮಂದ ದೃಷ್ಟಿ, ಗಾಯ ನಿಧಾನವಾಗಿ ಮಾಸುವಿಕೆ ಮತ್ತು ಸೋಂಕು. ಈ ಲಕ್ಷಣಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸೂಚಿಸಬಹುದು. ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಸೂಕ್ತ. ಮಧುಮೇಹದ ಅಪಾಯ ತಡೆಯಲು ರೋಗದ ಆರಂಭಿಕ ಪತ್ತೆ ಮತ್ತು ನಿರ್ವಹಣೆ ಅತ್ಯಗತ್ಯ ಎಂದು ಫರಿದಾಬಾದ್ನ ಅಮೃತ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಮೋಹಿತ್ ಶರ್ಮಾ ತಿಳಿಸಿದ್ದಾರೆ.
ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಈ ಹಿಂದೆ ನಾವು ಕೇವಲ ವಯಸ್ಸಾದ ಮಂದಿಯಲ್ಲಿ ಮಾತ್ರ ಮಧುಮೇಹ ಕಾಣುತ್ತಿದ್ದೆವು. ಆದರೀಗ ಯುವ ಜನರಲ್ಲೂ ಮಧುಮೇಹ ಕಾಣುತ್ತಿದ್ದೇವೆ ಎಂದು ಗುರುಗ್ರಾಮ್ನ ಸಿ.ಕೆ.ಬಿರ್ಲಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಮುಖ್ಯ ಕನ್ಸಲ್ಟಂಟ್ ಡಾ.ತುಶಾರ್ ತಯಲ್ ಹೇಳಿದರು.