ಹೈದರಾಬಾದ್: ಗಂಭೀರ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಆತನ ಹೆಂಡತಿ ಮತ್ತು ಸಹೋದರ ಇಬ್ಬರು ತಮ್ಮ ದೇಹದ ಅಂಗಾಂಗ ನೀಡಿ ಮರು ಜೀವನ ನೀಡಿದ್ದಾರೆ. ಸಾವಿನ ಅಂಚಿನಲ್ಲಿದ್ದ ವ್ಯಕ್ತಿಗೆ ತಮ್ಮ ದೇಹದ ಯಕೃತ್ನ ಭಾಗವನ್ನು ನೀಡಿ ಹೊಸ ಬದುಕಿಗೆ ಅವಕಾಶ ನೀಡಿದ್ದಾರೆ. ಈ ರೀತಿ ಅಪರೂಪದ ಶಸ್ತ್ರ ಚಿಕಿತ್ಸೆಯೊಂದನ್ನು ನನಕ್ರಮಗುಡದ ಸ್ಟಾರ್ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ.
ಮುಖ್ಯ ಯಕೃತ್ ಕಸಿ ವೈದ್ಯರಾಗಿರುವ ಡಾ ರಾಘವೇಂದ್ರ ಬಾಬು ಜೊತೆಗೆ ಎಂಡಿ ಡಾ ಗೋಪಿಚಂದ್ ಮನ್ನಂ ಮತ್ತು ಜೆಎಂಡಿ ಡಾ. ರಮೇಶ್ ಗುಂಡಪಟಿ ಈ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಸಂಬಂಧ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಅವರು, ಕರ್ನೂಲ್ನ 116 ಕೆಜಿ ತೂಕದ ಮಹೇಶ್ (35) ವ್ಯಕ್ತಿ ಯಕೃತ್ ಸಮಸ್ಯೆಯಿಂದ ಕಳೆದ ಡಿಸೆಂಬರ್ನಲ್ಲಿ ಸ್ಟಾರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಅವರ ಯಕೃತ್ ಸಂಪೂರ್ಣವಾಗಿ ಹಾನಿಯಾಗಿರುವುದು ಗೊತ್ತಾಗಿತ್ತು. ಇನ್ನೆರಡು ತಿಂಗಳಲ್ಲಿ ಯಕೃತ್ ಬದಲಾವಣೆ ಮಾಡಿದಲ್ಲಿ ಮಾತ್ರ ಆತ ಬದುಕಲು ಸಾಧ್ಯ ಎಂದು ಮನೆಯವರಿಗೆ ವಿಷಯ ತಿಳಿಸಿದೆವು. ಅವರ ಹೆಂಡತಿ ಈ ವೇಳೆ ಯಕೃತ್ ದಾನಕ್ಕೆ ಮುಂದಾದರು. ಆದರೆ, ಅಧಿಕ ತೂಕದಿಂದ ಬಳಲುತ್ತಿದ್ದ ಅವರಿಗೆ ಹೆಂಡತಿಯ ಯಕೃತ್ ಭಾಗ ಒಂದೇ ಸಾಕಾಗಿರಲಿಲ್ಲ.
ಈ ವೇಳೆ ಮಹೇಶ್ ಸಹೋದರ ಶಿವಕುಮಾರ್ ಕೂಡ ತಮ್ಮ ಯಕೃತ್ನ ಒಂದು ಭಾಗವನ್ನು ದಾನ ಮಾಡಲು ಮುಂದೆ ಬಂದರು. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಅಪರೂಪದ ಶಸ್ತ್ರ ಚಿಕಿತ್ಸೆಯೊಂದನ್ನು ಮಾಡಲಾಯಿತು. ಡಾ ಶ್ರೀನಿವಾಸ್ ರೆಡ್ಡಿ, ಡಾ ರಘುರಾಮ್ ರೆಡ್ಡಿ, ಡಾ ಸುನೀಲ್, ಡಾ ಭರತ್ ಕುಮಾರ್ ನಾರಾ ಮತ್ತು ಡಾ ಟಿವಿ ಆದಿತ್ಯ ಚೌದರಿ ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಿದರು ಎಂದು ವಿವರಣೆ ನೀಡಿದರು.