ನಿಮ್ಮ ಮೂಡ್ ತಾಜಾತನಗೊಳ್ಳಲು ಒಂದು ಕಪ್ ಚಹಾ ಸಾಕು. ಕೆಲವರಿಗಂತೂ ಬೆಳಗಿನ ಹೊತ್ತು ಒಂದು ಕಪ್ ಟೀ ಬೇಕೇ ಬೇಕು. ಇದರಿಂದ ಅವರಿಗೆ ಹೊಸತನ ದೊರೆಯುತ್ತದೆ. ಇಡೀ ದಿನ ಉಲ್ಲಸಿತದಿಂದಿರಲು ಇದು ಸಹಾಯಕ. ಅದರಲ್ಲೂ ಕೆಲಸದ ವೇಳೆ ಟೀ ಬ್ರೇಕ್ ತೆಗೆದುಕೊಳ್ಳುವುದರಿಂದ ಏಕಾಗ್ರತೆ ಮತ್ತು ಸರಿಯಾಗಿ ಚಿಂತಿಸಲು ನೆರವಾಗುತ್ತದೆ. ನಿಮ್ಮ ನೆಚ್ಚಿನ ಟೀ ಸ್ವಾದವನ್ನು ಇನ್ನಷ್ಟು ಹೆಚ್ಚಿಸಲು ಅನೇಕ ರೀತಿಯ ಟೀಗಳ ಆಯ್ಕೆಯೂ ನಿಮಗಿದೆ.
ಮಸಾಲಾ ಚಾಯ್: ಮಸಾಲಾ ಚಾಯ್. ಇದು ಭಾರತೀಯರ ಮಸಾಲಾ ಪದಾರ್ಥಗಳಿಂದ ತಯಾರಿಸುವ ಅದ್ಭುತ ಟೀ. ಭಿನ್ನವಾಗಿರುವ ಈ ಟೀಯಲ್ಲಿ ಶುಂಠಿ, ಮಸಾಲಾ ಪದಾರ್ಥಗಳಾದ ಕಾಳು ಮೆಣಸು, ಚಕ್ಕೆ ಅಥವಾ ಏಲಕ್ಕಿಯ ಘಮವಿದೆ. ಬೆಳಗ್ಗಿನ ಹೊತ್ತು ನಿಮ್ಮಲ್ಲಿ ಚೈತನ್ಯ ಮೂಡಿಸಲು, ಮನಸ್ಸನ್ನು ಪ್ರಶಾಂತಗೊಳಿಸಲು ಇದು ಸಹಾಯಕ.
ಗ್ರೀನ್ ಟೀ: ಗ್ರೀನ್ ಟೀ ಕೇವಲ ಸಂಜೆ ಹೊತ್ತಿಗೆ ಮಾತ್ರ ಸೀಮಿತ ಎಂದೇನೂ ಇಲ್ಲ. ದೇಹ ಮತ್ತು ಮನಸ್ಸಿನ ಖುಷಿಗೆ ಇದು ನಿಮ್ಮ ಆಯ್ಕೆಯಾಗಿರಲಿ. ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ಗ್ರೀನ್ ಟೀಯಲ್ಲಿ ತಾಜಾ ಮತ್ತು ಒಣಗಿದ ಹಸಿರೆಲೆಗಳಿವೆ. ಇವು ದೇಹ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುವುದರೊಂದಿಗೆ ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಗುಣ ಕ್ಯಾನ್ಸರ್ ಅಪಾಯ ತಗ್ಗಿಸುತ್ತದೆ.