ಹೈದರಾಬಾದ್: ಒಡ ಹುಟ್ಟಿದವರು ಉತ್ತಮ ಸ್ನೇಹಿತರ ಜೊತೆಗೆ ಮಾರ್ಗದರ್ಶಕರು ಆಗಿರುತ್ತಾರೆ. ಬಾಲ್ಯವನ್ನು ಒಟ್ಟಿಗೆ ಕಳೆಯುವ ಒಡಹುಟ್ಟಿದವರ ನಡುವೆ ಸ್ಪರ್ಧೆಗಳು, ವಾದಗಳು ಮತ್ತು ಜಗಳಗಳು ನಿರಂತರ. ಇವೆಲ್ಲದರ ಜೊತೆಗೆ ಅಮೂಲ್ಯವಾದ ಅನುಭವಗಳನ್ನು ಹೊಂದಿರುತ್ತೇವೆ. ಅಲ್ಲದೇ ಅವರಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಎಲ್ಲ ವಯೋಮಾನದ ಜನರು ಕೂಡ ಈ ಮಾತನ್ನು ಒಪ್ಪುತ್ತಾರೆ. ಎಷ್ಟೇ ವಯಸ್ಸಾಗಲಿ ಅಥವಾ ಎಷ್ಟೇ ಬ್ಯುಸಿ ಇರಲಿ, ನಿಮ್ಮ ಒಡ ಹುಟ್ಟಿದವರ ಜೊತೆಗಿದ್ದಾಗ ಅದೇ ಬಾಲ್ಯ ಮರಳುವುದು ಸುಳ್ಳಲ್ಲ. ಒಡಹುಟ್ಟಿದವರ ಈ ಬಂಧವನ್ನು ಆಚರಿಸಲು ಇಂದು ಸುದಿನ. ಕಾರಣ ಏಪ್ರಿಲ್ 10 ಒಡಹುಟ್ಟಿದವರ ದಿನ ಎಂದು ಪರಿಗಣಿಸಲಾಗಿದೆ.
ಒಡಹುಟ್ಟಿದವರ ನೆನಪಿನಾರ್ಥ ಆಚರಣೆ: ತಮ್ಮ ಗತಿಸಿದ ಒಡಹುಟ್ಟಿದವರ ನೆನಪಿನ ಗೌರವರ್ಥವಾಗಿ 1995ರಲ್ಲಿ ನ್ಯೂಯಾರ್ಕ್ನ ಕ್ಲೌಡಿಯ ಇವರ್ಟ್ ಈ ದಿನವನ್ನು ಸ್ಥಾಪಿಸಿದರು. ಪ್ರತ್ಯೇಕ ಅಪಘಾತವೊಂದರಲ್ಲಿ ಕ್ಲೌಡಿಯ ತಮ್ಮ ಒಡ ಹುಟ್ಟಿದವರಾದ ಅಲನ್ ಮತ್ತು ಲಿಸೆಟ್ಟೆ ಅವರನ್ನು ಕಳೆದುಕೊಂಡರು. ಅವರ ನೆನಪಿನಲ್ಲೇ ಈ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ ಏಪ್ರಿಲ್ 10 ಕ್ಲಾಡಿಯಾ ಸಹೋದರಿ ಲಿಸ್ಲೆಟ್ ಹುಟ್ಟು ಹಬ್ಬ ಕೂಡ.
2023ರಲ್ಲಿ ಈ ಒಡ ಹುಟ್ಟಿದವರ ದಿನವನ್ನು ಒಡಹುಟ್ಟಿದವರ ಶಕ್ತಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ಘೋಷವಾಕ್ಯದ ಮೂಲಕ ಒಡಹುಟ್ಟಿದವರ ನಡುವಿನ ಸಂಬಂಧವನ್ನು ಇದು ಪ್ರತಿ ಬಿಂಬಿಸುತ್ತದೆ. ಜೊತೆಗೆ ಈ ಬಲವನ್ನು ಪ್ರಶಂಸೆ ಮಾಡಬೇಕು ಎಂಬುದನ್ನು ಇದು ತಿಳಿಸುತ್ತದೆ. ಒಡಹುಟ್ಟಿದವರ ದಿನವನ್ನು ಆಚರಣೆಗೆ ತಂದ ಮೂರು ವರ್ಷದ ಬಳಿಕ ಇದಕ್ಕೆ ಹೆಚ್ಚಿನ ಮಾನ್ಯತೆ ದೊರಕಿತು. ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ 39 ರಾಜ್ಯಗಳಲ್ಲಿ ಇದನ್ನು ವಾರ್ಷಿಕ ದಿನಾಚರಣೆಗೆ ಮುಂದಾದರು. ಇದಾದ ಬಳಿಕ ಜಾಗತಿಕವಾಗಿ ಪ್ರತಿವರ್ಷ ಏಪ್ರಿಲ್ 10ರಂದು ಒಡಹುಟ್ಟಿದವರ ದಿನ ಆಚರಿಸಲಾಯಿತು.