ಎರಡು ವರ್ಷಗಳಿಂದ ಈ ಸಾಂಕ್ರಾಮಿಕ ಕೊರೊನಾ ಕಾರಣದಿಂದ ಹಲವರು ತಾವು ಕೆಲಸ ಮಾಡುವ ಕಚೇರಿ ಕಡೆ ಮುಖ ಮಾಡಿ ಅದೆಷ್ಟು ದಿನಗಳಾದವೋ? ಆರೋಗ್ಯ ಮುಖ್ಯ, ಅದರೊಂದಿಗೆ ಕೆಲಸವೂ ಮುಖ್ಯ. ಆ ಕೆಲಸಗಳನ್ನು ಉಳಿಸಿಕೊಳ್ಳಲು ಹೆಚ್ಚಿನ ಕಂಪನಿಗಳು ವರ್ಕ್ ಫ್ರಂ ಹೋಂ ಅವಕಾಶ ನೀಡುವುದು ಅನಿವಾರ್ಯವಾಗಿತ್ತು. ಕೊರೊನಾ ಕಾರಣದಿಂದ ಹುಟ್ಟಿಕೊಂಡ ಈ ಹೊಸ ಪರಿಕಲ್ಪನೆ ಇಂದು ಟ್ರೆಂಡ್ ಆಗಿ ಬೆಳೆದು ನಿಂತಿದೆ.
ಮತ್ತೆ ತಮ್ಮ ಹಳೆಯ ಕೆಲಸದ ಶೈಲಿಯನ್ನೇ ಪ್ರಾರಂಭಿಸಬೇಕು ಎಂದುಕೊಳ್ಳುತ್ತಿರುವ ಕಂಪನಿಗಳಿಗೆ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿರುವ ಹೊಸ ರೂಪಾಂತರಿಗಳು ಅಡ್ಡಗಾಲಾಗಿ ನಿಲ್ಲುತ್ತಿವೆ. ಮನೆಯಲ್ಲಿದ್ದು, ಬೋರ್ ಆಗಿರುವ ವರ್ಕರ್ಸ್ನ ಮೊದಲಿನಂತೆಯೇ ಕಚೇರಿಗೆ ಹೋಗಿ ಕೆಲಸ ಮಾಡಬೇಕು ಎಂಬ ಆಸೆ ಕೈಗೆಟುಕದ ನಕ್ಷತ್ರದಂತಾಗಿದೆ. ವರ್ಕ್ ಫ್ರಮ್ ಹೋಂ ಪರಿಕಲ್ಪನೆ ಸಾಮಾನ್ಯವಾಗಿರುವ ಇಂದು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವುದು ಉತ್ತಮ ಅವಕಾಶ ಅಂದುಕೊಳ್ಳುತ್ತಿರುವವರೂ ಇದ್ದಾರೆ.
ಮನೆಯಿಂದಲೇ ಕೆಲಸ ಮಾಡಿದರೆ ಬೆಳಗ್ಗೆ ಬೇಗ ಎದ್ದು ಆಫೀಸ್ಗೆ ಹೊರಡುವ ಗಡಿಬಿಡಿ ಇಲ್ಲ. ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಳ್ಳುವ ಕಿರಿಕಿರಿ ಇಲ್ಲ, ಒತ್ತಡವಿಲ್ಲದೆ ಕೆಲಸ ಮಾಡಬಹುದು ಎಂಬುದು ಹೆಚ್ಚಿನವರ ಅಭಿಪ್ರಾಯ. ಆದರೆ ಆನ್ಲೈನ್ನಲ್ಲಿ ಕೆಲಸ ಮಾಡುವುದರಿಂದ ಒತ್ತಡ ಕಡಿಮೆಯಾಗುವುದಿಲ್ಲ. ಬದಲಾಗಿ ಅದು ಬೇರೆ ರೀತಿಯ ಒತ್ತಡವನ್ನು ಹೆಚ್ಚಿಸುತ್ತದೆ. ಕೆಲಸದ ಕಡೆ ಹೆಚ್ಚು ಗಮನ ಕೊಡುವುದರಲ್ಲಿ ನಾವು ನಮ್ಮ ಆರೋಗ್ಯದ ಬಗೆಗಿನ ಕಾಳಜಿಯನ್ನು ಮರೆತು ಬಿಡುತ್ತೇವೆ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಯಾವೆಲ್ಲ ಕ್ರಮ ವಹಿಸಬೇಕು ಎಂಬುದಕ್ಕೆ ಉಪ ಪೋಷಣೆಯ ಸಹ ಸ್ಥಾಪಕರು ಹಾಗೂ ಮುಖ್ಯ ಆರೋಗ್ಯಾಧಿಕಾರಿ ಆಯುಷಿ ಲಖಪತಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ:ದೇಹದ ಹೈಡ್ರೇಶನ್ ಬಗ್ಗೆ ಹೆಚ್ಚಿನವರು ಚಿಂತಿಸುವುದಿಲ್ಲ. ಆರೋಗ್ಯದಾಯಕವಾಗಿರಲು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವುದು ಕೂಡಾ ಮುಖ್ಯ. ಅದಕ್ಕಾಗಿ ಸದಾ ನೀರು ಕುಡಿಯುವ ಅಥವಾ ದ್ರವ ಪದಾರ್ಥಗಳನ್ನು ಸ್ವೀಕರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಯಾಕೆಂದರೆ ನಾವು ಮನೆಯೊಳಗಿದ್ದರೂ ನಮ್ಮ ದೇಹ ಡಿಹೈಡ್ರೇಟ್ ಆಗುತ್ತದೆ. ಅದಕ್ಕಾಗಿ ಸದಾ ನೀರಿನ ಬಾಟಲಿ ಜತೆಯಲ್ಲಿಟ್ಟುಕೊಳ್ಳುವ, ಆಗಾಗ ನೀರು ಕುಡಿಯುವುವ ಅಭ್ಯಾಸ ಮಾಡಿಕೊಳ್ಳಿ. ಅದರ ಜತೆ ಇತರ ದ್ರವ ಪದಾರ್ಥಗಳಾದ ಎಳನೀರು, ಬಟರ್ಮಿಲ್ಕ್, ನಿಂಬುಪಾನೀಯ, ಇನ್ಫ್ಯೂಸ್ಡ್ ಮತ್ತು ಡಿಟಾಕ್ಸ್ ನೀರಿನಂತಹ ಇತರ ಆರೋಗ್ಯಕರ ದ್ರವಗಳ ಸೇವನೆ ಒಳ್ಳೆಯದು. ಒಂದು ವೇಳೆ ನೀವು ನೀರು ಕುಡಿಯಲು ಮರೆಯುವವರಾಗಿದ್ದರೆ ಅದಕ್ಕೂ ಒಂದು ಉಪಾಯವಿದೆ. ನಿಮ್ಮ ಮೊಬೈಲ್ ಅಥವಾ ವಾಚ್ನಲ್ಲಿ ಅಲಾರಾಮ್ ಸೆಟ್ ಮಾಡಿಟ್ಟುಕೊಳ್ಳಿ, ಆದರೆ ನೀರು ಕುಡಿಯುವುದನ್ನು ಮರೆಯಬೇಡಿ.
ಪೋಷಕಾಂಶ ಆಹಾರಗಳ ಸೇವನೆ:ಕೆಲಸ ಮಾಡುತ್ತಿರುವಾಗ ಸ್ನ್ಯಾಕ್ಸ್ ತಿನ್ನುವುದನ್ನು ನಾವು ಇಷ್ಟಪಡುತ್ತೇವೆ. ಆದರೆ ನೆನಪಿಟ್ಟುಕೊಳ್ಳಿ ದೇಹದ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಬಹುಮುಖ್ಯ. ದಿನದ ಮೂರು ಹೊತ್ತಿನ ಊಟ ಅಂದರೆ ಸಮತೋಲಿತ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಸರಿಯಾದ ಸಮಯ ಹಾಗೂ ಕ್ರಮದಲ್ಲಿ ಸೇವನೆ ಮಾಡಬೇಕು. ಒಂದು ಹೊತ್ತಿನ ಊಟ ಬಿಟ್ಟು ಖಾಲಿ ಹೊಟ್ಟೆಯಲ್ಲಿರುವುದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ. ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್‌ಗಳು ಮತ್ತು ಇತರ ಪ್ರಮುಖ ಪೋಷಕಾಂಶಗಳಿಂದ ತುಂಬಿದ ಊಟ ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿರಿಸುವುದಲ್ಲದೆ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಹಾಗೂ ಆಯಾಸದಂತಹ ಸಮಸ್ಯೆಗಳಿಂದ ದೂರವಿರಿಸುತ್ತದೆ.
ಊಟದ ಮಧ್ಯೆ ತಿಂಡಿ ಸೇವನೆ:ಹುರಿದ ತಾವರೆ ಬೀಜ, ಹುರಿದ ಕಡಲೆಕಾಯಿ, ಹಣ್ಣುಗಳು, ಪ್ರೋಟೀನ್ ಬಾರ್‌ಗಳು ಮತ್ತು ಇತರ ಆರೋಗ್ಯಕರ ತಿಂಡಿಗಳನ್ನು ಯಾವಾಗಲೂ ತಮ್ಮ ಬ್ಯಾಗ್ನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಒಂದು ಊಟದಿಂದ ಇನ್ನೊಂದು ಊಟದ ಮಧ್ಯೆ ಹಸಿವಾದರೆ ಇವುಗಳನ್ನು ತಿಂದು ಹಸಿವಿನ ನೋವನ್ನು ನೀಗಿಸಿಕೊಳ್ಳಬಹುದು. ಈ ಪೌಷ್ಟಿಕಾಂಶಭರಿತ ತಿಂಡಿ ಸೇವನೆ ಆರೋಗ್ಯ ಕಾಪಾಡುತ್ತವೆ. ಇದರಿಂದ ಹೆಚ್ಚಿನ ಸಕ್ಕರೆ, ಉಪ್ಪಿನಂಶವುಳ್ಳ ಪೋಶಕಾಂಶರಹಿತ ಅನಾರೋಗ್ಯಕರ ಆಹಾರ ಪದಾರ್ಥ ಸೇವಿಸುವುದು ತಪ್ಪುತ್ತದೆ. ತೂಕ ಹೆಚ್ಚಿ ದಪ್ಪಗಾಗುವ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ನೀವು ತುತ್ತಾಗುವ ಸಮಸ್ಯೆಯೂ ಇರುವುದಿಲ್ಲ.
ಉಸಿರಾಟದ ವ್ಯಾಯಾಮಗಳು:ಉಸಿರಾಟದ ವ್ಯಾಯಾಮಗಳನ್ನು ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಜತೆಗೆ ಏಕಾಗ್ರತೆಯನ್ನು ಹೆಚ್ಚಿಸುವುದು ಸುಳ್ಳಲ್ಲ. ಉಸಿರಾಟದ ವ್ಯಾಯಾಮ ನಿಮ್ಮ ರಕ್ತದಲ್ಲಿನ ಆಮ್ಲಜನಕದ ಹರಿವನ್ನು ಹೆಚ್ಚಿಸುವುದರ ಜತೆಗೆ ದೇಹ ಉಲ್ಲಾಸವಾಗಿರುವಂತೆ ಮಾಡುತ್ತದೆ. ಆಳವಾದ ಉಸಿರಾಟವು ಆತಂಕ, ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಈ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಮೆದುಳನ್ನು ತಾಜಾತನದಿಂದಿದ್ದು, ಹೆಚ್ಚು ಕೆಲಸ ಮಾಡಲು ಸಕಾರಾತ್ಮಕ ಮನಸ್ಥಿತಿಯನ್ನು ಒದಗಿಸುತ್ತದೆ.
ಸ್ಟ್ರೆಚಿಂಗ್:ಲ್ಯಾಪ್ಟಾಪ್ನಲ್ಲಿ ದಿನವಿಡೀ ಕೆಲಸ ಮಾಡುತ್ತಿದ್ದರೆ ದೇಹಕ್ಕೆ ಜಡ ಹಿಡಿಯುತ್ತದೆ. ಕೆಲಸದ ಅವಧಿಯ 30 ಅಥವಾ 60 ನಿಮಿಷಗಳಿಗೊಮ್ಮೆ ನಿಮ್ಮ ದೇಹಕ್ಕೆ ವಿರಾಮವನ್ನು ಕೊಡಿ. ಕುಳಿತ ಸ್ಥಳದಿಂದ ಎದ್ದು ದೇಹವನ್ನು ಸ್ವಲ್ಪ ಹೊತ್ತು ವಾರ್ಮಪ್ ಮಾಡಿಕೊಳ್ಳಿ. ಸ್ಟ್ರೆಚಿಂಗ್ ಮಾಡುವುದರಿಂದ ವಿಶ್ರಾಂತಿಯೊಂದಿಗೆ ದೇಹಕ್ಕೆ ಉಲ್ಲಾಸದ ಅನುಭವವಾಗುತ್ತದೆ. ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುವಂತಹ ಶಕ್ತಿ ನೀಡುತ್ತದೆ. ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸ ಮಾಡುವುದರಿಂದ ಬೆನ್ನುನೋವು ಮತ್ತು ಮೊಣಕಾಲಿನ ಕೀಲುಗಳಲ್ಲಿ ನೋವು ಉಂಟಾಗುತ್ತದೆ. ಸ್ಟ್ರೆಚಿಂಗ್ ದೇಹದಲ್ಲಿ ರಕ್ತದ ಹರಿವು ಉತ್ತಮಗೊಳಿಸಿ ನಿಮ್ಮನ್ನು ಫಿಟ್ ಆಗಿರಿಸುತ್ತದೆ.
ಕಂಪ್ಯೂಟರ್ ಕನ್ನಡಕವನ್ನು ಧರಿಸಿ:ಮನೆಯಲ್ಲೇ ಕೆಲಸ ಮಾಡುವುದರಿಂದ ಹೆಚ್ಚಿನ ಹೊತ್ತು ಕಂಪ್ಯೂಟರ್ ಮುಂದೆಯೇ ಕುಳಿತುಕೊಳ್ಳುವಂತೆ ಮಾಡುತ್ತದೆ. ನಾವು ಹೆಚ್ಚು ಹೊತ್ತು ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡಿದರೆ ಕಣ್ಣಿಗೆ ಅಪಾಯ ಹೆಚ್ಚು. ಕಂಪ್ಯೂಟರ್ನಿಂದ ಬರುವ ಬ್ಲೂ ಲೈಟ್ ನಮ್ಮ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಕಂಪ್ಯೂಟರ್ನಿಂದ ವಿರಾಮ ಪಡೆದೊಡನೆ ನಾವು ನಮ್ಮ ಮೊಬೈಲ್ ಸ್ಕ್ರೀನ್ ನೋಡಲು ಪ್ರಾರಂಭಿಸುತ್ತೇವೆ. ದಿನದ ಹೆಚ್ಚಿನ ಹೊತ್ತು ನಮ್ಮ ಕಣ್ಣಿನ ಮೇಲೆ ಬ್ಲೂಲೈಟ್ ಪ್ರಭಾವ ಇದ್ದೇ ಇರುತ್ತದೆ. ಇದರಿಂದ ಕಣ್ಣು ಕೆಂಪಗಾಗುವುದು, ದೃಷ್ಟಿ ಕಡಿಮೆಯಾಗುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳಿಂದ ದೂರವಿರಲು ಕಂಪ್ಯೂಟರ್ ಅಥವಾ ಮೊಬೈಲ್ ಬಳಸುವಾಗ ಆದಷ್ಟು ಕಂಪ್ಯೂಟರ್ ಗ್ಲಾಸ್ ಬಳಸಿದರೆ ಉತ್ತಮ.