ಪರ್ಥ್ (ಆಸ್ಟ್ರೇಲಿಯಾ): ಇನ್ಸ್ಟಾಗ್ರಾಮ್, ಟಿಕ್ ಟಾಕ್ ಮತ್ತು ಫೇಸ್ ಬುಕ್ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ವೇಪಿಂಗ್ ಮಾಡುವುದನ್ನು ಉತ್ತೇಜಿಸುವ ರೀತಿಯಲ್ಲಿ ವಿಡಿಯೋಗಳನ್ನು ತೋರಿಸುತ್ತಿವೆ. ಇ-ಸಿಗರೇಟ್ ಸೇದುವುದು ಸಾಮಾಜಿಕವಾಗಿ ಒಪ್ಪಿಕೊಂಡ ಚಟವಾಗಿದೆ ಎನ್ನುವ ರೀತಿಯಲ್ಲಿ ಈ ಪ್ಲಾಟ್ಫಾರ್ಮ್ಗಳು ಬಿಂಬಿಸುತ್ತಿರುವುದು ಕಂಡು ಬರುತ್ತಿದೆ. ಆಸ್ಟ್ರೇಲಿಯಾದಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ತೋರಿಸುವುದನ್ನು ನಿಷೇಧಿಸಿ ದಶಕಗಳೇ ಆಗಿ ಹೋಗಿರುವುದು ಗಮನಾರ್ಹ.
ಆದರೆ ಇ-ಸಿಗರೇಟ್ಗಳಿಗೆ ಈ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ವ್ಯಾಪಕ ಉತ್ತೇಜನ ನೀಡುತ್ತಿರುವುದು ಕಳವಳಕಾರಿಯಾಗಿದೆ. ಧೂಮಪಾನ ಆರೋಗ್ಯಕ್ಕೆ ಹಾನಿಕರವೆಂಬುದನ್ನು ಜನತೆಗೆ ತಿಳಿಸಲು ಕಳೆದ ಅನೇಕ ದಶಕಗಳಿಂದ ಮಾಡಲಾಗುತ್ತಿರುವ ಪ್ರಯತ್ನಗಳು ಇನ್ನು ಮುಂದೆ ನಿರರ್ಥಕವಾಗಲಿವೆ. ಬಹುತೇಕ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳ ನೀತಿ ನಿಯಮಗಳ ಪ್ರಕಾರ ಇ-ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವಂತಿಲ್ಲ. ಆದಾಗ್ಯೂ ಈ ನಿಯಮಗಳನ್ನು ಕಡೆಗಣಿಸಿ ಈ - ಸಿಗರೇಟ್ ಒಳ್ಳೆಯದು ಎನ್ನುವ ರೀತಿಯಲ್ಲಿ ಪ್ರಚಾರ ನೀಡಲಾಗುತ್ತಿದೆ.
ಪ್ರಚೋದಕ ವಿಡಿಯೋಗಳಿಂದ ವೇಪಿಂಗ್ ಹೆಚ್ಚಳ:ಆಸ್ಟ್ರೇಲಿಯಾ ಸೇರಿದಂತೆ ಜಾಗತಿಕವಾಗಿ ಯುವ ಸಮುದಾಯದಲ್ಲಿ ಇ-ಸಿಗರೇಟ್ ಬಳಕೆ ವೇಗವಾಗಿ ಬೆಳೆಯುತ್ತಿದೆ. ಆದರೆ ಇ-ಸಿಗರೇಟ್‌ಗಳಿಂದ ಉಂಟಾಗುವ ಆರೋಗ್ಯ ಹಾನಿಯ ಬಗ್ಗೆ ತಿಳಿದೇ ಇದೆ. ವೇಪಿಂಗ್ ಬಗ್ಗೆ ಪ್ರಚೋದನಕಾರಿ ಸಾಮಾಜಿಕ ಮಾಧ್ಯಮ ಮೆಸೇಜುಗಳು ವಿಶೇಷವಾಗಿ ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸುವ ಯುವ ಜನರ ಮೇಲೆ ಪರಿಣಾಮ ಬೀರಬಹುದು. ಕೆಲವು ಸಂದರ್ಭಗಳಲ್ಲಿ, ಈ ಸಂದೇಶಗಳು ಹದಿಹರೆಯದವರನ್ನು ಸ್ಪಷ್ಟವಾಗಿ ದಾರಿ ತಪ್ಪಿಸುತ್ತವೆ ಎಂಬುದು ಖಚಿತ.
ಇ-ಸಿಗರೆಟ್‌ಗಳನ್ನು ಒಳಗೊಂಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ವೀಕ್ಷಿಸುವ ಯುವಜನರು ಇ-ಸಿಗರೇಟ್‌ಗಳ ಬಗ್ಗೆ ಮೆಚ್ಚುಗೆ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ತೋರಿಸಿದೆ. ಇ-ಸಿಗರೇಟ್ ಜಾಹೀರಾತು ಮತ್ತು ಕಂಟೆಂಟ್ ಕ್ರಿಯೇಟರ್ಸ್ ರಚಿಸಿದ ವಿಷಯ ಎರಡರಲ್ಲೂ ಇದು ನಿಜವಾಗಿದೆ. ಇ-ಸಿಗರೇಟ್ ಕಂಪನಿಗಳಿಗೆ ಕಂಟೆಂಟ್ ಕ್ರಿಯೇಟರ್ಸ್ ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಕೆಲಸವನ್ನು ಮಾಡುತ್ತಿದ್ದಾರೆ.