ಚಳಿಗಾಲದ ಋತುಮಾನದಲ್ಲಿ ವಾತಾವರಣದಲ್ಲಾಗುವ ಬದಲಾವಣೆಗಳು ಅನೇಕ ಸೋಂಕುಗಳಿಗೂ ಆಹ್ವಾನ ನೀಡುತ್ತವೆ. ಈ ಸಮಯದಲ್ಲಿ ದೇಹಕ್ಕೆ ಉಷ್ಣಾಂಶ, ಶುಷ್ಕತೆಯ ಪ್ರಮಾಣ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರದ ಆಯ್ಕೆಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸುವುದು ಅತಿ ಅಗತ್ಯ. ಚಳಿಗಾಲದಲ್ಲಿ ಸೇವಿಸುವ ಆಹಾರಗಳು ದೇಹದ ತಾಪಮಾನ ಹೆಚ್ಚಿಸುವ ಜೊತೆಗೆ ರೋಗ ನಿರೋಧಕವನ್ನೂ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಈ ಕೆಳಗಿನ ಆಹಾರಗಳು ಸೂಕ್ತ.
ಕ್ಯಾರೆಟ್ ಹಲ್ವ: ಭಾರತೀಯರ ಅಚ್ಚುಮೆಚ್ಚಿನ ಸಿಹಿ ತಿನಿಸಿನಲ್ಲಿ ಇದೂ ಒಂದು. ಕ್ಯಾರೆಟ್, ಹಾಲು, ಸಕ್ಕರೆ ಮತ್ತು ತುಪ್ಪದಿಂದ ಮಾಡಿದ ಹಲ್ವಾವನ್ನು ಸೇವಿಸುವುದರಿಂದ ಅದರಲ್ಲಿನ ಸಾಮಗ್ರಿ ದೇಹಕ್ಕೆ ಹೇರಳ ಪೋಷಕಾಂಶ ನೀಡುತ್ತದೆ.
ಹಸಿರು ತರಕಾರಿ: ಚಳಿಗಾಲದ ಸಮಯದಲ್ಲಿ ದೇಹದ ಜೀರ್ಣ ಶಕ್ತಿ ಕುಸಿಯುತ್ತದೆ. ಈ ಹಿನ್ನೆಲೆಯಲ್ಲಿ ಹಗುರ ಪೋಷಕಾಂಶಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಸಮೃದ್ದ ಪೋಷಕಾಂಶಯುಕ್ತ ಹಸಿರು ತರಕಾರಿಗಳು ಈ ನಿಟ್ಟಿನಲ್ಲಿ ನೆರವಾಗುತ್ತವೆ.
ಗೋದಾ ಕಾ ಲಡ್ಡು/ಅಂಟು ಉಂಡೆ:ಇದು ಭಾರತದ ಸಾಂಪ್ರದಾಯಿಕ ಸಿಹಿತಿನಿಸು. ಸೇವನೆ ಮಾಡುವಂತಹ ಅಂಟು, ಗೋಧಿ ಹಿಟ್ಟು, ತುಪ್ಪ ಮತ್ತು ಅನೇಕ ಒಣಹಣ್ಣು ಮತ್ತು ಮಸಾಲೆಗಳಿಂದ ಇದನ್ನು ಮಾಡಲಾಗುತ್ತದೆ. ಚಳಿಗಾಲದಲ್ಲಿ ಇದು ದೇಹಕ್ಕೆ ಬೇಕಾದ ಉಷ್ಣಾಂಶ ನೀಡಿ, ಬೆಚ್ಚಗಿರಿಸುತ್ತದೆ.
ಮಿಠಾಯಿ: ಭಾರತೀಯರ ಅಚ್ಚುಮೆಚ್ಚಿನ ಸಿಹಿ ತಿನಿಸುಗಳ ಪೈಕಿ ಚಿಕ್ಕಿ/ ಮಿಠಾಯಿಗಳು ಪ್ರಮುಖ. ಕಡಲೆ ಬೀಜ, ಎಣ್ಣು, ಬೆಲ್ಲದಿಂದ ತಯಾರಿಸುವ ಈ ಮಿಠಾಯಿಗಳು ಬಹುತೇಕರಿಗೆ ಮೆಚ್ಚಾಗುತ್ತವೆ. ಇದೂ ಕೂಡ ದೇಹಕ್ಕೆ ಅಗತ್ಯ ಪ್ರಮಾಣದ ಎಣ್ಣೆಯ ಅಂಶವನ್ನು ಪೂರೈಸಿ, ಶಕ್ತಿ ನೀಡುತ್ತದೆ.
ಪಂಜಿರಿ:ಉತ್ತರ ಭಾರತದ ಸಾಂಪ್ರದಾಯಿಕ ಸಿಹಿತಿನಿಸು ಇದು. ಹಬ್ಬ-ಹರಿದಿನದಂತಹ ವಿಶೇಷ ಸಂದರ್ಭದಲ್ಲಿ ತಯಾರಿಸಲಾಗುತ್ತದೆ. ಮಹಿಳೆಯರು ತಮ್ಮ ಋತುಚಕ್ರವನ್ನು ಮುಂದೂಡಲು ಇದನ್ನು ಸೇವಿಸುವುದನ್ನು ಕಾಣಬಹುದು. ಹಿಟ್ಟು, ತುಪ್ಪ, ಸಕ್ಕರೆ, ಒಣ ಹಣ್ಣುಗಳಿಂದ ಕೂಡಿರುವ ಈ ಸಿಹಿ ಸಮೃದ್ದ ಆರೋಗ್ಯ ಪ್ರಯೋಜಗಳನ್ನು ನೀಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಅಡುಗೆ ಮನೆಯೇ ಔಷಧಾಲಯ; ಕೆಮ್ಮು- ನೆಗಡಿಗೆ ಅಲ್ಲೇ ಇದೆ ಮದ್ದು