ಬೇಸಿಗೆ ಶುರುವಾಯಿತೆಂದರೆ, ದೇಹ ತಣ್ಣಗೆ ಮಾಡುವ ಹಣ್ಣಿನ ಜ್ಯೂಸ್ ಕುಡಿಯೋಣ ಎನ್ನಿಸುತ್ತದೆ. ಇದರಿಂದ ದೇಹಕ್ಕೆ ತಂಪು ಮಾತ್ರವಲ್ಲ ಪೋಷಕಾಂಶಗಳೂ ಲಭ್ಯವಾಗುತ್ತವೆ. ಅದರಲ್ಲೂ ಬಿರು ಬೇಸಿಗೆಯ ಸಮಯದಲ್ಲಿ ತರಹೇವಾರಿ ಹಣ್ಣುಗಳು ಕೂಡ ಮಾರುಕಟ್ಟೆಗೆ ಬರುವುದರಿಂದ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸಬಹುದು. ಈ ಹಣ್ಣುಗಳು ಋತುಮಾನದಲ್ಲಿ ಉಂಟಾಗುವ ನಿರ್ಜಲೀಕರಣ ಸೇರಿದಂತೆ ಅನೇಕ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅದರಲ್ಲೂ ಸೀಸನಲ್ ಹಣ್ಣುಗಳ ಸ್ಮೂಥಿಗಳು ಮನಸ್ಸಿಗೆ ಮಾತ್ರವಲ್ಲ ದೇಹವನ್ನೂ ತಾಜಾಗೊಳಿಸುತ್ತದೆ. ಪೌಷ್ಟಿಕಾಂಶ ನೀಡುವ ಜೊತೆಗೆ ಬಿಸಿಲಿನಿಂದ ಪಾರು ಮಾಡುವ ಕೆಲವು ರುಚಿಕರ ಸ್ಮೂಥಿಗಳ ರೆಸಿಪಿ ಇಲ್ಲಿದೆ.
ಬ್ಲೂ ಬೆರ್ರಿ ಸ್ಮೂಥಿ: ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ ಮತ್ತು ಫೈಬರ್ ಅಂಶವನ್ನು ಬ್ಲೂ ಬೆರ್ರಿ ಹೊಂದಿದೆ. ತೆಂಗಿನಕಾಯಿ ಹಾಲು ಹಾಕಿ ಚೆನ್ನಾಗಿ ರುಬ್ಬುವುದರಿಂದ ಇದರ ರುಚಿಯನ್ನು ಮತ್ತಷ್ಟು ಸ್ವಾದಿಷ್ಟಗೊಳಿಸಬಹುದು. ಜೇನು ತುಪ್ಪ ಅಥವಾ ಸಕ್ಕರೆ ಬಳಕೆ ಮಾಡುವ ಮೂಲಕ ಸಿಹಿ ಹೆಚ್ಚಿಸಬಹುದು. ಪುದಿನ ಎಲೆಗಳನ್ನು ಬೆರೆಸಬಹುದು.
ಕಲ್ಲಂಗಡಿ ಸ್ಮೂಥಿ: ಬೇಸಿಗೆಯಲ್ಲಿ ನೀರಿನ ಬೇಗೆ ನೀಗಿಸುವ ಹಣ್ಣು ಕಲ್ಲಂಗಡಿ. ದೀರ್ಘಕಾಲದವರೆಗೆ ದೇಹವನ್ನು ನಿರ್ಜಲೀಕರಣಗೊಳ್ಳದಂತೆ ಕಾಪಾಡುತ್ತದೆ. ಈ ಋತುಮಾನದಲ್ಲಿ ಹೆಚ್ಚು ಲಭ್ಯವಿರುವ ಕಲ್ಲಂಗಡಿ ಹಣ್ಣಿಗೆ ವೆನಿಲ್ಲಾ ಯೊಗರ್ಟ್ (ಮೊಸರು) ಜೊತಗೆ ಪುದಿನಾ ಎಲೆಗಳನ್ನು ಬೆರೆಸಿ ಸ್ಮೂಥಿ ತಯಾರಿಸಬಹುದು.