ಬೇಸಿಗೆ ಬಂತೆಂದರೆ ಸಾಕು 'ಹಣ್ಣುಗಳ ರಾಜ' ಮಾವಿನದ್ದೇ ಸದ್ದು. ಭಾರತದಲ್ಲಿ ಬಹುತೇಕರ ಮೆಚ್ಚಿನ ಹಣ್ಣು ಮಾವು. ಅಷ್ಟೇ ಅಲ್ಲ, ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯುವ ಜೊತೆಗೆ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಭಾರತದ ಸಂಸ್ಕೃತಿ ಮತ್ತು ಊಟದಲ್ಲಿ ಮಾವು ಬೆರೆತಿದೆ. ಭಾರತದಲ್ಲಿ ಸುಮಾರು 1,000 ಮಾವಿನ ತಳಿಗಳನ್ನು ಬೆಳೆಯಲಾಗುತ್ತದೆ. ಪ್ರತಿ ರಾಜ್ಯವೂ ತಮ್ಮದೇ ಅದ ವಿಶೇಷ ಮಾವು ತಳಿಗಳನ್ನು ಹೊಂದಿದೆ.
ಮಾವು ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ಮಾವಿನಲ್ಲಿ ವಿಟಮಿನ್ಸ್, ಮಿನರಲ್ಸ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಸಮೃದ್ದವಾಗಿವೆ. ಭಾರತದಲ್ಲಿ ಅನೇಕ ವಿಧದ ಮಾವಿನ ತಳಿಗಳಿದ್ದರೂ ಅವುಗಳಲ್ಲಿ ಕೆಲವು ಮಾತ್ರ ಹೆಚ್ಚು ಜನಪ್ರಿಯ.
ಬಾದಾಮಿ/ಬೈಂಗನಪಲ್ಲಿ: ಆಂಧ್ರ ಪ್ರದೇಶ, ಕೇರಳ ಮತ್ತು ತೆಲಂಗಾಣದಲ್ಲಿ ಈ ಮಾವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸಿಹಿ, ಜ್ಯೂಸಿ, ಫೈಬರ್ರಹಿತ ತಿರಳು ಹೊಂದಿದೆ. ಮಾರುಕಟ್ಟೆಗೆ ಬರುವ ಮೊದಲ ಮಾವು ಇದಾಗಿದೆ. ತೇಳು ಸಿಪ್ಪೆ ಹೊಂದಿದ್ದು ಸಣ್ಣ ಗಾತ್ರದಲ್ಲಿ ಇರುತ್ತದೆ. ಇದರಲ್ಲಿ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್, ವಿಟಮಿನ್ ಎ ಇದ್ದು ಚರ್ಮದ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ.
ಕೇಸರಿ ಮಾವು: ಗುಜರಾತ್, ಮಹಾರಾಷ್ಟ್ರ ಮೂಲದ ಮಾವು ಹೆಚ್ಚು ಸುಂಗಂಧ ಬೀರುತ್ತದೆ. ಆಮ್ ರಸ್ಗೆ ಹೆಚ್ಚು ಖ್ಯಾತಿಯನ್ನು ಈ ಹಣ್ಣುಗಳು ಹೊಂದಿವೆ. ಈ ಹಣ್ಣನ್ನು ಮಾವಿನ ರಾಣಿ ಎಂದೇ ಕರೆಯಲಾಗುತ್ತದೆ. ಡೆಸಾರ್ಟ್, ಐಸ್ಕ್ರೀಂ ಮತ್ತು ಶೇಕ್ಗಳಿಗೆ ಅದ್ಭುತ ಸ್ವಾದ ನೀಡುತ್ತವೆ ಇವು.
ದಶೇರಿ ಮಾವು: ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ಮಲಿಹಬಾದ್ನ ಮೂಲದ ಈ ಹಣ್ಣುಗಳು ಕೂಡ ಹೆಚ್ಚು ಖ್ಯಾತಿ ಪಡೆದಿದೆ. ವಿಟಮಿನ್ ಸಿ, ವಿಟಮಿನ್ ಎ, ಇ, ಕಬ್ಬಿಣ ಕ್ಯಾಲ್ಸಿಯಂ ಇದರಲ್ಲಿ ಹೆಚ್ಚಾಗಿದೆ. ಪೊಟಾಷಿಯಂ ಗುಣ ಹೊಂದಿರುವ ಹಣ್ಣಗಳು ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿವೆ.