ನವದೆಹಲಿ:ಅದ್ಬುತ ಆರೋಗ್ಯ ಪ್ರಯೋಜನ ಹೊಂದಿರುವ ಹಿನ್ನೆಲೆ ಬಹುತೇಕರು ಕಾಳು ಅಥವಾ ಕರಿ ಮೆಣಸನ್ನು ಆಹಾರ ಪದ್ಧತಿಯಲ್ಲಿ ಬಳಕೆ ಮಾಡುತ್ತಾರೆ. ಇದು ಆರೋಗ್ಯದ ಜೊತೆ ರುಚಿ, ಸ್ವಾದವನ್ನು ಕೂಡ ಹೆಚ್ಚಿಸುತ್ತದೆ. ಕಾಳು ಮೆಣಸಿನಲ್ಲಿ ಅನೇಕ ರಾಸಾಯನಿಕ ಅಂಶಗಳಿದ್ದು, ಇದು ಆರೋಗ್ಯಕ್ಕೆ ಬಲು ಉಪಯೋಗವಾಗಿದೆ. ಓಲಿಯೊರೆಸಿನ್‌ಗಳು ಮತ್ತು ಆಲ್ಕಲಾಯ್ಡ್‌ಗಳು ಪೈಪೆರಿನ್ ಮತ್ತು ಚಾವಿಸಿನ್ ಇದರಲ್ಲಿ ಇದ್ದು, ಇದು ಹೆಚ್ಚು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಈ ಅಂಶಗಳು ದೀರ್ಘಕಾಲದ ಅನಾರೋಗ್ಯದ ಅಪಾಯ ಕಡಿಮೆ ಮಾಡುತ್ತದೆ. ಹಾಗಾದರೆ ಕಾಳು ಮೆಣಸು ಯಾವ ರೀತಿ ಆರೋಗ್ಯ ಪ್ರಯೋಜನ ಹೊಂದಿದೆ ಎಂಬ ಪ್ರಮುಖ ಅಂಶಗಳು ಇಲ್ಲಿದೆ.
ಕ್ಯಾನ್ಸರ್ ತಡೆ: ಕರಿ ಮೆಣಸಿನಲ್ಲಿ ಪೈಪೆರಿನ್ ಇದ್ದು, ಇದು ಕ್ಯಾನ್ಸರ್ ತಡೆಯುವ ಶಕ್ತಿ ಹೊಂದಿದೆ. ಅರಿಶಿಣದೊಂದಿಗೆ ಇದನ್ನು ಮಿಶ್ರಣ ಮಾಡಿದಾಗ ಇದರಲ್ಲಿ ಕ್ಯಾನ್ಸರ್ ವಿರೋಧಿ ಗುಣವಾದ ಆಂಪ್ಲಿಪೈಡ್ ದುಪ್ಪಟ್ಟುಗೊಳ್ಳುತ್ತದೆ. ಈ ಮಸಾಲೆಯಲ್ಲಿ ವಿಟಮಿನ್ ಸಿ, ವಿಟಮಿನ್ , ಫ್ಲವೊನೊಯ್ಡ್ ಮತ್ತು ಕ್ಯಾರೊಟೆನ್ಸ್ನಂತಹ ಆಂಟಿ ಆಕ್ಸಿಡೆಂಟ್ ಗುಣ ಇದ್ದು, ರೋಗದ ವಿರುದ್ಧ ಹೋರಾಡುತ್ತದೆ.
ಜೀರ್ಣಕ್ರಿಯೆಗೆ ಸುಲಭ: ಕಾಳು ಮೆಣಸನ್ನು ಹಾಗೆಯೇ ತಿನ್ನುವುದರಿಂದ ಹೊಟ್ಟೆಯಲ್ಲಿ ಇದು ಹೈಡ್ರೊಕ್ಲೊರಿಕ್ ಆ್ಯಸಿಡ್ ಬಿಡುಗಡೆ ಮಾಡುತ್ತದೆ. ಇದು ಆರೋಗ್ಯಯುತ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಕರಳನ್ನು ಶುದ್ದಗೊಳಿಸುತ್ತದೆ. ಹೈಡ್ರೊಕ್ಲೊರಿಕ್ ಆ್ಯಸಿಡ್ ಹೆಚ್ಚುವರಿಯಾಗಿ ಜೀರ್ಣಾಂಗವ್ಯೂಹದ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಈ ಹಿನ್ನೆಲೆ ಯಾವುದೇ ಋತುಮಾನ ಇದ್ದರೂ, ಪ್ರತಿ ಆಹಾರದಲ್ಲಿ ಕಾಳು ಮೆಣಸು ಸೇರಿಸುವುದು ಅದ್ಬುತ ಪ್ರಯೋಜನ ನೀಡುತ್ತದೆ.
ತೂಕ ಇಳಿಕೆಗೆ ಸಹಾಯಕ:ಆಹಾರಕ್ಕೆ ಅತ್ಯಂತ ಹೆಚ್ಚಿನ ಪೋಷಕಾಂಶವನ್ನು ಈ ಕಾಳು ಮೆಣಸು ನೀಡುತ್ತದೆ. ಜೊತೆಗೆ ಇದರಲ್ಲಿನ ಪೈಟೊನ್ಯೂಟ್ರಿಯೆಂಟ್ಸ್ಗಳು ಕೊಬ್ಬಿನ ಜೀವಕೋಶದಲ್ಲಿ ಬೇಗ ಕರಗಿ, ಚಯಾಪಚಯನವನ್ನು ಹೆಚ್ಚಿಸುತ್ತದೆ. ತಾಜಾ ಕರಿ ಮೆಣಸನ್ನು ಸೇವಿಸಿದಾಗ ಇದು ಬೆವರುವಿಕೆಗೆ ಕಾರಣವಾಗುತ್ತದೆ. ಇದರಿಂದ ದೇಹದ ವಿಷದ ಅಂಶ ಹೊರಗೆ ಹೋಗುತ್ತದೆ.