ದೇಶದಲ್ಲಿ ಕಂಡುಬರುವ 900 ಪ್ರಮುಖ ಔಷಧೀಯ ಸಸ್ಯ ಪ್ರಭೇದಗಳಲ್ಲಿ ಶೇಕಡಾ 10 ರಷ್ಟು ವಿನಾಶದ ಭೀತಿ ಎದುರಿಸುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಶೇ 15ರಷ್ಟು ಔಷಧೀಯ ಸಸ್ಯಗಳನ್ನು ಮಾತ್ರ ನಾವು ಬೆಳೆಸುತ್ತಿದ್ದೇವೆ. ಉಳಿದವು ಅರಣ್ಯ ಮೂಲದವು ಎಂದು ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್(WAC)ನಲ್ಲಿ ವಿಷಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಭೂಮಿಯು ಒಂದು ಸಂಭಾವ್ಯ ಔಷಧೀಯ ಸಸ್ಯವನ್ನು ಕಳೆದುಕೊಳ್ಳುತ್ತಿದೆ. ಇದು ನೈಸರ್ಗಿಕ ಪ್ರಕ್ರಿಯೆಗಿಂತ ನೂರು ಪಟ್ಟು ವೇಗದ ಬೆಳವಣಿಗೆ ಎಂದು ಛತ್ತೀಸ್‌ಗಢ ರಾಜ್ಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಮಂಡಳಿ ಸಿಇಒ ಜೆಎಸಿಎಸ್ ರಾವ್ ತಿಳಿಸಿದರು.
ಮಿತಿಮೀರಿದ ಶೋಷಣೆ, ಮಾದಕವಸ್ತು ಉದ್ಯಮದ ಅವಲಂಬನೆ, ನಗರೀಕರಣ, ಅರಣ್ಯ ನಾಶದಂಥ ಬೆಳವಣಿಗೆಗಳು ಈ ಪರಿಸ್ಥಿಗೆ ಕೆಲವು ಕಾರಣಗಳಾಗಿವೆ. ಹೀಗಾಗಿ ನಾವು ಕ್ಷೇತ್ರ ಅಧ್ಯಯನ, ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಾಯಿದೆ, 1973ರಂತಹ ವಿಶೇಷ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಸಂರಕ್ಷಣಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾವ್ ಸಲಹೆ ನೀಡಿದ್ದಾರೆ.