ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಈಗಾಗಲೇ ಹಲವಾರು ಸಂಶೋಧನೆಗಳು ನಡೆದಿವೆ. ಮಕ್ಕಳಲ್ಲಿ ನಿದ್ರೆಯ ಕೊರತೆಯಿಂದಾಗಿ ಮಾನಸಿಕ ಆರೋಗ್ಯ ಹದಗೆಡುವುದು, ಶೈಕ್ಷಣಿಕವಾಗಿ ಹಿಂದುಳಿಯುವುದು ಮತ್ತು ನಡವಳಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ ಎಂದು ಹಿಂದಿನ ಸಂಶೋಧನೆಗಳು ಹೇಳಿದ್ದವು.
ಅಮೆರಿಕದ ಬ್ರಿಗಮ್ ಯಂಗ್ ವಿಶ್ವವಿದ್ಯಾಲಯ ಇತ್ತೀಚೆಗೆ ಸಿನ್ಸಿನಾಟಿ ಚಿಲ್ಡ್ರನ್ಸ್ ಹಾಸ್ಪಿಟಲ್ ಮೆಡಿಕಲ್ ಸೆಂಟರ್ನಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಮಕ್ಕಳಿಗೆ ನಿದ್ರೆ ಸಾಕಾಗದಿದ್ದರೆ, ಆಹಾರ ಕ್ರಮ ತಪ್ಪಲಿದೆ. ಈ ಮೂಲಕ ಅವರಲ್ಲಿ ತೂಕ ಹೆಚ್ಚಳವಾಗುವ ಸಾಧ್ಯತೆ ಇದೆ ಹಾಗೂ ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ವರದಿ ಮಾಡಲಾಗಿದೆ.
ಹದಿಹರೆಯದವರು ಕಡಿಮೆ ನಿದ್ರೆ ಮಾಡುವುದರಿಂದ ಅವರಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಅಂಶ ಹೆಚ್ಚಿರುವ ಪಾನೀಯವನ್ನು ಸೇವಿಸಬೇಕು ಎನಿಸುತ್ತದೆ. ಇದು ಅವರ ಆರೋಗ್ಯಕ್ಕೆ ಪೂರಕವಲ್ಲ ಎಂದು ಬ್ರಿಗಮ್ ಯಂಗ್ ವಿಶ್ವವಿದ್ಯಾಲಯದ ಕ್ಲಿನಿಕಲ್ ಆ್ಯಂಡ್ ಡೆವಲಪ್ಮೆಂಟರ ಸೈಕಾಲಜಿಯ ಪ್ರೊಫೆಸರ್ ಮತ್ತು ಸಂಶೋಧನೆಯ ಪ್ರಮುಖ ಲೇಖಕರಾದ ಡಾ. ಕಾರಾ ಡುರಾಸಿಯೋ ಹೇಳಿದ್ದಾರೆ.
ಸಂಶೋಧನೆ ಮಾಡಿದ್ದು ಹೀಗೆ: ಸಂಶೋಧನೆಯ ವೇಳೆ ಸುಮಾರು 93 ಮಂದಿ ಹದಿಹರೆಯದವರನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಅವರ ನಿದ್ರೆ ಮತ್ತು ಆಹಾರ ಸೇವನೆಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಒಂದು ವಾರದವರೆಗೆ ರಾತ್ರಿಯ ವೇಳೆ ಆರೂವರೆ ಗಂಟೆ ನಿದ್ರೆ ಮಾಡಿಸಿ, ಮತ್ತೊಂದು ವಾರ ಒಂಭತ್ತೂವರೆ ಗಂಟೆಗಳ ಕಾಲ ನಿದ್ರೆ ಮಾಡಿಸಲಾಯಿತು. ಈ ವೇಳೆ ಎರಡು ವಾರಗಳಲ್ಲಿ ಅವರ ಆಹಾರ ಪದ್ಧತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು.
ಸಂಶೋಧನೆಯಿಂದ ಬಂದ ಫಲಿತಾಂಶ:ಕಡಿಮೆ ನಿದ್ರೆಗೆ ಒಳಗಾಗುವ ಹದಿಹರೆಯದವರು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ ಎಂದು ಸಂಶೋಧನೆಯ ಫಲಿತಾಂಶದಿಂದ ತಿಳಿದುಬಂತು.
ಆರೋಗ್ಯಕರ ನಿದ್ರೆಯಲ್ಲಿದ್ದಾಗ ಅಂದರೆ ದಿನವೂ ರಾತ್ರಿ ಒಂಭತ್ತೂವರೆ ಗಂಟೆ ನಿದ್ರೆ ಮಾಡುವವರಿಗೆ ಹೋಲಿಕೆ ಮಾಡಿದರೆ ಕಡಿಮೆ ನಿದ್ರೆ ಮಾಡುವವರು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಅಂಶವಿರುವ ಪಾನೀಯಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದರು. ಇದರ ಜೊತೆಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಪ್ರಮಾಣವೂ ಕಡಿಮೆಯಾಗಿತ್ತು. ಇನ್ನೊಂದು ಅಚ್ಚರಿಯ ವಿಷಯವೆಂದರೆ ರಾತ್ರಿ 9 ಗಂಟೆಯ ಮೇಲೆ ಈ ಬದಲಾವಣೆಗಳು ಕಾಣುತ್ತಿದ್ದವು.
ತೂಕ ಹೆಚ್ಚಾಗುವುದು ಹೀಗೆ: ಕಡಿಮೆ ನಿದ್ರೆ ಮಾಡುವ ಹದಿಹರೆಯದವರು ಪ್ರತಿದಿನ 12 ಗ್ರಾಮ್ ಹೆಚ್ಚುವರಿ ಸಕ್ಕರೆ ಅಂಶವಿರುವ ಪದಾರ್ಥಗಳನ್ನು ಸೇವಿಸುತ್ತಾರೆ ಎಂದು ಸಂಶೋಧನೆ ಮೂಲಕ ಗೊತ್ತಾಗಿದೆ. ಶಾಲೆಗಳಿದ್ದಾಗ ಸುಮಾರು ವರ್ಷದ ಬಹುತೇಕ ರಾತ್ರಿಗಳಲ್ಲಿ ಹದಿಹರೆಯದವರಿಗೆ ಸಾಕಷ್ಟು ನಿದ್ರೆ ಇರುವುದಿಲ್ಲ. ಇದರಿಂದಾಗಿ ಒಂದು ದಿನಕ್ಕೆ 12 ಗ್ರಾಮ್ ಸಕ್ಕರೆ ಅಂಶವೆಂದರೂ, ವರ್ಷಕ್ಕೆ 2 ಕೆಜಿಗೂ ಅಧಿಕ ಸಕ್ಕರೆ ಅಂಶ ದೇಹಕ್ಕೆ ಸೇರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಡುರಾಸಿಯೋ ಹೇಳಿದ್ದಾರೆ.
ಈ ಸಂಶೋಧನೆಯಿಂದ ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಿದರೆ ಮಕ್ಕಳ ಆರೋಗ್ಯ ರಕ್ಷಣೆಗೆ ಕುತ್ತುಂಟಾಗುತ್ತದೆ ಎಂದು ತಿಳಿದುಬಂದಿದ್ದು, ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಈ ಸಂಶೋಧನೆಯನ್ನು ಬೆಂಬಲಿಸಿದೆ.
ಇದನ್ನೂ ಓದಿ:ಚಳಿಗಾಲದಲ್ಲಿ ಸ್ಟೀಮ್ ತೆಗೆದುಕೊಳ್ಳುವುದು ಹೇಗೆ ಪ್ರಯೋಜನಕಾರಿ?