ಯುವಕ ಅಥವಾ ಯುವತಿ ನೋಡಲು ಆಕರ್ಷಕವಾಗಿ ಕಾಣಬೇಕು ಎಂದರೆ ಎತ್ತರವಿರಬೇಕು ಅನ್ನೋದು ಹಲವರ ಅಭಿಪ್ರಾಯ. ಹೀಗಾಗಿ ಸಹಜವಾಗಿ ಎಲ್ಲರೂ ಎತ್ತರವಿರಬೇಕು ಎಂದೇ ಬಯಸುತ್ತಾರೆ. ಆದರೆ, ಈ ಎತ್ತರವೇ ನಮಗೆ ಕೆಲವು ಅನಾರೋಗ್ಯಗಳನ್ನು ಉಂಟು ಮಾಡುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. ದೈಹಿಕ ಎತ್ತರವು ಹೃದ್ರೋಗದಿಂದ ಹಿಡಿದು ಕ್ಯಾನ್ಸರ್‌ನಂತಹ ಅಪಾಯಕಾರಿ ಸಮಸ್ಯೆಗಳನ್ನು ತಂದೊಡ್ಡಬಲ್ಲದು ಎನ್ನುತ್ತದೆ ಸಂಶೋಧನೆ.
ರಾಕಿ ಮೌಂಟೇನ್ ರೀಜನಲ್ ವಿಎ ಮೆಡಿಕಲ್ ಸೆಂಟರ್‌ನ ಶ್ರೀಧರನ್ ರಾಘವನ್ ಅವರ ಪ್ರಕಾರ, ಎತ್ತರವಾಗಿರುವುದು ಹೃತ್ಕರ್ಣದ ಕಂಪನ ಮತ್ತು ರಕ್ತನಾಳಗಳ ಉಬ್ಬುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ, ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನ ಅಪಾಯಕ್ಕೂ ಕಾರಣವಾಗಬಹುದು ಎನ್ನುತ್ತಾರೆ.
ಓಪನ್ ಆಕ್ಸೆಸ್ ಜರ್ನಲ್ ಪಿಎಲ್ಒಎಸ್ ಜೆನೆಟಿಕ್ಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೇಳಿದಂತೆ, ಎತ್ತರವು ನರವ್ಯೂಹದ ಮೇಲೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯನ್ನು ಬಹಿರಂಗಪಡಿಸಿದೆ. ತುದಿ ನರಗಳ ಮೇಲೆ ಎತ್ತರವು ಹೆಚ್ಚಿನ ಹಾನಿ ಉಂಟು ಮಾಡುತ್ತದೆ. ಜೊತೆಗೆ ಚರ್ಮ ಮತ್ತು ಮೂಳೆ ಸವೆತದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಪ್ರಸ್ತಾಪಿಸಿದೆ.