ಮೂರು ವರ್ಷ ಕಳೆದರೂ ಕೋವಿಡ್ ಸೋಂಕಿನಿಂದ ಜಗತ್ತು ಹೋರಾಡುತ್ತಲೇ ಇದೆ. ಕೋವಿಡ್ನ ಉಪತಳಿಗಳ ದಾಳಿಗಳಿಂದಾಗಿ ಅಮೆರಿಕ, ಚೀನಾದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದೇ ಹೊತ್ತಿಗೆ ಭಾರತದಲ್ಲಿ ಹೊಸ ಸೋಂಕು ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಅದೇ H3N2 ಸೋಂಕು.
ವೇಗವಾಗಿ ಹರಡುವ ಸೋಂಕು: ಕೋವಿಡ್ ಸೋಂಕಿನಷ್ಟೇ ವೇಗವಾಗಿ ಹರುಡುವ ಈ ಸೋಂಕು ಎಚ್3ಎನ್2, ಇನ್ಫ್ಲುಯೆಂಜಾ ಎ ವೈರಸ್ನ ಉಪತಳಿ ಇದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದೆರಡು ತಿಂಗಳಿನಿಂದ ಕಾಣಿಸಿಕೊಳ್ಳುತ್ತಿರುವ ಈ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಇದುವರೆಗೆ 26 ಮಂದಿಗೆ ಈ ಸೋಂಕು ಕಾಣಿಸಿಕೊಂಡಿದೆ. ಹೆಚ್ಚು ವೇಗವಾಗಿ ಈ ಸೋಂಕು ಹರಡುವ ಹಿನ್ನೆಲೆ ಈಗಾಗಲೇ ಭಾರತೀಯ ವೈದ್ಯಕೀಯ ಸಂಘಟನೆಯು ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಲ್ಲದೇ, ರಾಜ್ಯದಲ್ಲೂ ಕೂಡ ಈ ಸಂಬಂಧ ಸಭೆ ನಡೆಸಲಾಗಿದ್ದು, ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.
ಸೋಂಕಿನ ಲಕ್ಷಣ ಏನು: ಕೋವಿಡ್ನಂತೆಯೇ ಸಾಮಾನ್ಯ ಜ್ವರ, ಕೆಮ್ಮು, ನೆಗಡಿ, ಸ್ನಾಯು ಸೆಳೆತ, ಅತಿಸಾರ ಮತ್ತು ಸುಸ್ತಿನ ಲಕ್ಷಣವನ್ನು ಇದು ಹೊಂದಿದ್ದು, ಕೆಲವರಲ್ಲಿ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಸೋಂಕು ಹೊಂದಿದವರಲ್ಲಿ ಜ್ವರ ಕಡಿಮೆಯಾದರೂ ಕೆಮ್ಮು ದೀರ್ಘಕಾಲ ಕಾಡಲಿದೆ.
ಸೋಂಕಿನಿಂದ ರಕ್ಷಣೆ ಹೇಗೆ: ಕೋವಿಡ್ನಷ್ಟು ಪ್ರಬಲವಾಗಿ ಹರಡುತ್ತಿರುವ ಈ ಸೋಂಕಿನ ತಡೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೈಗಳನ್ನು ಆಗ್ಗಿಂದಾಗಲೇ ಸೋಪಿನಿಂದ ತೊಳೆಯುತ್ತಿರುವುದು ಅವಶ್ಯವಾಗಿದೆ. ಬೇಸಿಗೆಯಲ್ಲಿ ಕಾಡುವ ಈ ಸೋಂಕಿನಿಂದ ನಿರ್ಜಲೀಕರಣ ಕೂಡ ಆಗುವ ಹಿನ್ನೆಲೆ ಹೆಚ್ಚು ನೀರು ಸೇವಿಸಿ. ಸಾರ್ವಜನಿಕ ಅಂತರ ಪಾಲನೆ, ಜನಸಂದಣಿ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು ಉತ್ತಮ. ಈ ಸೋಂಕಿಗೆ ವೈದ್ಯರ ಸಮಾಲೋಚನೆ ಆಧಾರದ ಮೇಲೆ ಔಷಧ ಸೇವಿಸಿ.