ಬೆಂಗಳೂರು: ನಗರೀಕರಣವಾಗುತ್ತಿರುವ ಇಂದಿನ ಜಗತ್ತಿನಲ್ಲಿ ಜನರನ್ನು ಅತಿಯಾಗಿ ಕಾಡುತ್ತಿರುವ ಸಮಸ್ಯೆ ವಾಯು ಮಾಲಿನ್ಯ. ಇದು ಅತ್ಯಂತ ಕಾಳಜಿ ವಿಷಯವೂ ಆಗಿದೆ. ಶ್ವಾಸಕೋಶ ಸಮಸ್ಯೆ, ಹೃದಯ ರಕ್ತನಾಳ ಸಮಸ್ಯೆ ಹಾಗು ನಿರ್ದಿಷ್ಟ ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಅಪಾಯವನ್ನು ವಾಯು ಮಾಲಿನ್ಯ ತಂದೊಡ್ಡುತ್ತದೆ. ಇಂತಹ ವಾಯು ಮಾಲಿನ್ಯವನ್ನು ಸಂಪೂರ್ಣವಾಗಿ ಹೋಗಲಾಡಿಸುವುದು ಅಸಾಧ್ಯ. ಆದರೆ, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು.
ಮಾಸ್ಕ್ ಧರಿಸಿ: ವಾಯು ಮಾಲಿನ್ಯವಿರುವ ಪ್ರದೇಶಗಳಲ್ಲಿ ಸಂಚರಿಸುವಾಗ ಅದರ ಸೂಕ್ಷ್ಮ ಕಣಗಳು ದೇಹದೊಳಗೆ ಸೇರದಂತೆ ಎನ್ 95 ಮತ್ತು ಎನ್ 99 ಮಾಸ್ಕ್ ಧರಿಸುವುದು ಅಗತ್ಯ. ಆದರೆ ಮಾಸ್ಕ್ ಅನ್ನು ಸರಿಯಾಗಿ ಧರಿಸುವುದು ಮುಖ್ಯ.
ಮನೆಯೊಳಗೆ ಇರಿ: ಮಾಲಿನ್ಯಕ್ಕೆ ಹೆಚ್ಚು ಒಳಗಾಗುವ ಬದಲು ಸಾಧ್ಯವಾದಷ್ಟು ಮನೆಯೊಳಗೆ ಇರಿ. ಮನೆಯ ಒಳಾಂಗಣವನ್ನು ಕೂಡ ಏರ್ ಪ್ಯೂರಿಫೈಯರ್‌ನಿಂದ ಶುಚಿಗೊಳಿಸಿ. ಮನೆಯೊಳಗೆ ಹೊರಗಿನ ಮಾಲಿನ್ಯಗಳು ಬಾರದಂತೆ ಕಿಟಕಿ, ಮನೆ ಬಾಗಿಲುಗಳನ್ನು ಮುಚ್ಚಿ.
ಹೈಡ್ರೇಟ್ ಆಗಿರಿ: ಚಳಿಗಾಲವಾದರೂ ಸಾಧ್ಯವಾದಷ್ಟು ನೀರು ಕುಡಿಯಿರಿ. ಇದರಿಂದ ದೇಹದ ವಿಷಕಾರಿ ಅಂಶ ಹೊರಹೋಗಲು ಸಾಧ್ಯವಾಗುತ್ತದೆ. ದೇಹದಲ್ಲಿ ಸರಿಯಾದ ಪ್ರಮಾಣದ ನೀರು ಇರುವುದರಿಂದ ಇದು ಮಾಲಿನ್ಯದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವಾಗುತ್ತದೆ.