ಇಂದಿನ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಸಾಮಾನ್ಯವಾಗಿ ಬಹುತೇಕರ ಮೂಗಿನ ಮೇಲೆ ಕನ್ನಡಕ ಕುಳಿತಿರುವುದು ಸಹಜ. ಈ ಕನ್ನಡಕಗಳು ಹುಡುಗಿಯರ ಮುಖದ ಅಂದಕ್ಕೆ ಕೆಲವೊಮ್ಮೆ ತೊಡಕಾಗುತ್ತವೆ. ಇದೇ ಕಾರಣಕ್ಕೆ ಕೆಲವು ವಿಶೇಷ ಸಂದರ್ಭದಲ್ಲಿ ಕಾಂಟಾಕ್ಟ್ ಲೆನ್ಸ್ ಮೊರೆ ಹೋಗುತ್ತಾರೆ. ಆದರೆ, ಈ ಲೆನ್ಸ್ ಬಳಕೆಯಿಂದ ಕೆಲವು ಬಾರಿ ಹಿಂದೆ ಮುಂದೆ ಯೋಚನೆ ಮಾಡುವುದು ಸುಳ್ಳಲ್ಲ. ಇದು ಮುಖದ ಅಂದ ಹೆಚ್ಚಿಸಿದರೂ ಅನೇಕ ಬಾರಿ ಮಾಡುವ ಸಣ್ಣ ತಪ್ಪುಗಳು ಕಣ್ಣಿಗೆ ಭಾರಿ ಬೆಲೆ ತರುವಂತೆ ಮಾಡುತ್ತವೆ. ಅದರಲ್ಲೂ ವಿಶೇಷವಾಗಿ ಮೇಕಪ್ ಬಳಕೆ ಸಂದರ್ಭದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ.
ಕಾಂಟಾಕ್ಟ್ ಲೆನ್ಸ್ ಬಳಕೆ ಮಾಡುವಾಗ ಬಳಕೆ ಮಾಡುವ ಮೇಕಪ್ ಸಾಮಗ್ರಿಗಳನ್ನು ಎಚ್ಚರಿಕೆಯಿಂದ ಆರಿಸಬೇಕು. ವಿಶೇಷವಾಗಿ ಕಣ್ಣಿನ ಮೇಕಪ್ ಉತ್ಪನ್ನಗಳನ್ನು ಆಯ್ಕೆ ಮಾಡುವಾಗ ನೇತ್ರ ತಜ್ಞರಿಂದ ಅನುಮೋದನೆ ಮಾಡಿದ ವಸ್ತುಗಳ ಬಳಕೆಗೆ ಆದ್ಯತೆ ನೀಡಿ. ಅಂತಹ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ವಸ್ತುಗಳಿಂದ ಕಣ್ಣಿಗಾಗುವ ಅಲರ್ಜಿಗಳ ಪ್ರಮಾಣ ಕಡಿಮೆ ಇರುತ್ತದೆ.
ಕೈ ಶುದ್ಧತೆ: ಕಾಂಟಾಕ್ಟ್ ಲೆನ್ಸ್ಗಳ ಬಳಕೆ ಮಾಡುವ ಮುನ್ನ ನಿಮ್ಮ ಕೈಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಒಣಗಿಸಿಕೊಳ್ಳಿ. ಕಾಂಟಾಕ್ಟ್ ಲೆನ್ಸ್ ಹಾಕಿದ ಬಳಿಕವೇ ಮೇಕಪ್ ತಯಾರಿ ಶುರು ಮಾಡಿ. ಇಲ್ಲದೇ ಹೋದಲ್ಲಿ ಮೇಕಪ್ ಉತ್ಪನ್ನಗಳು ನಿಮ್ಮ ಕೈಯಲ್ಲಿ ಕುಳಿತು ಲೆನ್ಸ್ ಮತ್ತು ಕಣ್ಣಿನ ಕಾರ್ನಿಯಾಗೆ ಸಮಸ್ಯೆಗೆ ಕಾರಣ ಆಗಬಹುದು. ಕಾಂಟಾಕ್ಟ್ ಲೆನ್ಸ್ ಬಳಕೆ ಮಾಡಿದಾಗ ಹೇರ್ ಡ್ರೈಯರ್, ಸ್ಪ್ರೈಯರ್, ಡಿಯೋಡರೆಂಟ್ಗಳನ್ನು ಬಳಕೆ ಮಾಡದಿರುವುದು ಉತ್ತಮ. ಬಳಕೆ ಮಾಡಲೇ ಬೇಕು ಎಂದರೆ ಲೆನ್ಸ್ ಧರಿಸಿದ ಬಳಿಕ ಮಾಡಿರಿ.