ಪುಟ್ಟ ಮಗುವೊಂದು ಮನೆ ತುಂಬಿದಾಗ ಕೇವಲ ಸಂತಸ ಮಾತ್ರವಲ್ಲ. ಅಲ್ಲಿ ಜವಾಬ್ದಾರಿಯು ದುಪ್ಪಟ್ಟಾಗುತ್ತದೆ. ಶಿಶುಗಳ ಆರೈಕೆ ಸುಲಭದ ಮಾತಲ್ಲ. ಕಣ್ಣಲ್ಲಿ ಕಣ್ಣಿಟ್ಟು ಮಕ್ಕಳನ್ನು ಜೋಪಾನ ಮಾಡುವಾಗ ಹಲವು ವಿಚಾರಗಳ ಕುರಿತು ಗಮನ ಹರಿಸಬೇಕಾಗುತ್ತದೆ. ಅದರಲ್ಲೂ ಮಗುವಿನ ತ್ವಚೆಯ ವಿಷಯದಲ್ಲಿ ಹೆಚ್ಚಿನ ಕಾಳಜಿ ಹೊಂದಿರುವುದು ಅವಶ್ಯ. ಮಗುವಿನ ನಾಜೂಕು ತ್ವಚೆ ಬಗ್ಗೆ ಗಮನವಹಿಸದೇ ಹೋದಲ್ಲಿ ಅದು ಬಿರುಸು, ಕೆರೆತ ಮತ್ತು ಸೋಂಕಿಗೆ ಕಾರಣವಾಗುವ ಸಾಧ್ಯತೆ ಇದೆ. ಇನ್ನು, ಚಳಿಗಾಲದಲ್ಲಿ ಮಗುವಿನ ತ್ವಚೆ ಬಗ್ಗೆ ಹೆಚ್ಚಿನ ನಿಗಾ ನೀಡುವುದು ಅವಶ್ಯವಾಗಿದೆ.
ಮಾಶ್ಚರೈಸರ್ ಮರೆಯಬೇಡಿ: ಮಕ್ಕಳ ತ್ವಚೆ ಮೃದುವಾಗಿದ್ದು, ಶೀಘ್ರವಾಗಿ ಮಾಶ್ಚರೈಸರ್ ಅನ್ನು ಕಳೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಉತ್ತಮ ಗುಣಮಟ್ಟದ ಮಾಶ್ಚರೈಸರ್ ಅನ್ನು ಮಗುವಿನ ಸ್ನಾನವಾದ ಕೂಡಲೇ ಹಚ್ಚಬೇಕು. ಮಾಶ್ಚರೈಸರ್ ಆಯ್ಕೆ ಮಾಡುವಾಗ ಅದು ಅಲರ್ಜಿ ಆಗದಂತಹ ಮತ್ತು ಸುವಾಸನೆ ರಹಿತವಾಗಿರುವುದನ್ನು ಆರಿಸುವುದು ಉತ್ತಮ. ಮಗುವಿಗೆ ಪೆಟ್ರೋಲಿಯಂ ಜೆಲ್ಲಿ ಮತ್ತು ತೆಂಗಿನ ಎಣ್ಣೆಯನ್ನು ಆಯ್ಕೆ ಮಾಡಬಹುದಾಗಿದೆ. ಮಕ್ಕಳ ಉತ್ಪನ್ನಗಳಲ್ಲಿ ಸುವಾಸನೆ, ಬಣ್ಣ ಮತ್ತು ಆಲ್ಕೋಹಾಲ್ ಅಂಶದ ಬಗ್ಗೆ ಎಚ್ಚರವಹಿಸುವುದು ಅಗತ್ಯ. ಯಾಕೆಂದರೆ ಇದು ಮಗುವಿನ ತ್ವಚೆಗೆ ಕಿರಿಕಿರಿ ಮಾಡುತ್ತದೆ.