ವಿಶ್ವಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತದ ಜನರ ಅಗತ್ಯಗಳನ್ನು ಪೂರೈಸುವ ಎಲ್ಲಾ ಆಹಾರ ಪದಾರ್ಥ ಲಭ್ಯವಿದ್ದರೂ, ಪ್ರತಿ ಒಂಬತ್ತು ಜನರಲ್ಲಿ ಒಬ್ಬರು ತಮ್ಮ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಏಷ್ಯಾದಲ್ಲಿ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗ ಅಂತವರು ವಾಸಿಸುತ್ತಿದ್ದಾರೆ. ಪ್ರಪಂಚದ ಆಹಾರ ಮತ್ತು ಕೃಷಿ ವ್ಯವಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡದಿದ್ದರೆ, 2050ರ ವೇಳೆಗೆ, ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಎರಡು ಶತಕೋಟಿಗೆ ತಲುಪುತ್ತದೆ ಎಂದು ಹೇಳಲಾಗಿದೆ.
ವಿಶ್ವ ಆಹಾರ ದಿನ
ಜಗತ್ತಿನಾದ್ಯಂತ ಹಸಿವಿನ ಸಮಸ್ಯೆಗಳನ್ನು ಎದುರಿಸಲು ಮತ್ತು ಎಲ್ಲರಿಗೂ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 16 ರಂದು 'ವಿಶ್ವ ಆಹಾರ ದಿನ'ವನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲ, ಈ ದಿನವು ಆಹಾರ ಮತ್ತು ಕೃಷಿ ಸಂಸ್ಥೆ (FAO) ವಾರ್ಷಿಕೋತ್ಸವಕ್ಕೂ ಸಾಕ್ಷಿಯಾಗುವುದರಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ.
1979 ರಲ್ಲಿ ವಿಶ್ವ ಆಹಾರ ದಿನವನ್ನು ಮೊದಲು ಹಂಗೇರಿಯನ್ ಮಾಜಿ ಕೃಷಿ ಮತ್ತು ಆಹಾರ ಸಚಿವ ಡಾ. ಪಾಲ್ ರೋಮಾನಿ ಆಚರಿಸಿದರು. ಇದೀಗ ವಿಶ್ವದ 150ಕ್ಕೂ ಹೆಚ್ಚು ದೇಶಗಳು ಆಚರಿಸುತ್ತವೆ. 1945ರ ಅಕ್ಟೋಬರ್ 16ರಂದು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. "ಬೆಳೆಯಿರಿ, ಪೋಷಿಸಿ, ಉಳಿಸಿಕೊಳ್ಳಿ. ಒಂದು ಗೂಡಿ. ನಮ್ಮ ಇಂದಿನ ಕಾರ್ಯಗಳೇ ನಮ್ಮ ಭವಿಷ್ಯ" ಎಂಬುದು ಈ ಬಾರಿಯ ವಿಶ್ವ ಆಹಾರ ದಿನದ ಘೋಷ ವಾಕ್ಯವಾಗಿದೆ.
ಅಂಕಿ-ಅಂಶಗಳು ಏನ್ ಹೇಳುತ್ತವೆ?
ವಿಶ್ವಸಂಸ್ಥೆಯ ಪ್ರಕಾರ, 1990ರ ನಂತರ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದಲ್ಲಿ ಅಪೌಷ್ಟಿಕ ಜನರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. 1990-1992ರಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ.23.3ರಷ್ಟು ಇತ್ತು. 2014-2016ರಲ್ಲಿ ಈ ಪ್ರಮಾಣ ಶೇ.12.9ಕ್ಕೆ ಇಳಿದಿದೆ. ಆದರೆ ವಿಶ್ವದಲ್ಲಿ 79.5 ಕೋಟಿ ಜನರು ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ.99ರಷ್ಟು ಮಂದಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಶೇ.60ರಷ್ಟು ಮಂದಿ ಮಹಿಳೆಯರಾಗಿದ್ದಾರೆಂಬುದು ಮತ್ತೊಂದು ಗಮನಿಸಬೇಕಾದ ಅಂಶವಾಗಿದೆ.
ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ನೇ ಸ್ಥಾನ.. ಅವೈಜ್ಞಾನಿಕ ವರದಿ ಎಂದು ಆಕ್ಷೇಪ ವ್ಯಕ್ತಪಡಿಸಿದ ಭಾರತ