ಲಂಡನ್: ಆರೋಗ್ಯ ವೃದ್ಧಿಗೆ ಸಹಾಯವಾಗಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಪೂರಕಗಳು ಯಾವುದೇ ಆರೋಗ್ಯ ಪ್ರಯೋಜನವನ್ನು ನೀಡುವುದಿಲ್ಲ. ಇದು ಔಷಧ ಕಂಪನಿಗಳಿಂದ ಹಣ ಮಾಡುವ ಯೋಜನೆ ಅಷ್ಟೇ ಎಂದು ಯುಕೆ ವಿಜ್ಞಾನಿಗಳು ತಿಳಿಸಿದ್ದಾರೆ. ಜನರು ಇಂತಹ ಪೂರಕಗಳಿಗೆ ಬದಲಾಗಿ ನಿಜವಾದ ಹಣ್ಣು-ಆಹಾರಗಳನ್ನು ತಿನ್ನುವುದರಿಂದ ಆರೋಗ್ಯ ಪ್ರಯೋಜನ ಪಡೆಯಬಹುದು ಎಂದು ಲಂಡನ್ನ ಕಿಂಗ್ ಕಾಲೇಜ್ನ ಜೆನಿಟಿಕ್ ಎಪಿಟೆಮಿಯೊಲಾಜಿ ತಜ್ಞ ಟಿಮ್ ಸ್ಪೆಕ್ಟರ್ ತಿಳಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಬಹುತೇಕ ಪೂರಕಗಳು ಚೀನಿ ಫ್ಯಾಕ್ಟರಿಗಳಿಂದ ತಯಾರಾಗಿರುತ್ತದೆ. ಇವು ಯಾವುದೇ ಕಾರಣಕ್ಕೂ ಕೆಲಸ ಮಾಡುವುದಿಲ್ಲ. ಈ ಪೂರಕಗಳನ್ನು ಒಂದೇ ಕಂಪನಿ ಉತ್ಪಾದಿಸುತ್ತಿದೆ. ಭವಿಷ್ಯದಲ್ಲಿ ಅವುಗಳು ದೈತ್ಯ ಆಹಾರ ಕಂಪನಿಗಳಾಗಲಿವೆ ಎಂದು ಸೆಕ್ಟರ್ ಹೇಳಿದರು.
ಬಜೆಟ್ ದೊಡ್ಡದಿದೆ. ಅವರು ಸಾವಯವ ಪೂರಕಗಳನ್ನು ತಯಾರಿಸುವಂತಹ ಕುಶಲಕರ್ಮಿಗಳಲ್ಲ. ಅವರು ಚೀನಾದಲ್ಲಿ ದೊಡ್ಡ ಫ್ಯಾಕ್ಟರಿ ಮಾಡಿದ್ದು, ಇದರ ಮೇಲೆ ನಿಮಗೆ ಯಾವುದೇ ನಿಯಂತ್ರಣವಿಲ್ಲ. ಶೇ 99 ರಷ್ಟು ಪೂರಕಗಳು ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಪೂರಕಗಳಿಗೆ ನಾವು ಹಾಕುವ ಹಣವನ್ನು ನಿಜವಾದ ಆಹಾರಗಳಿಗೆ ಹಾಕಬೇಕಿದೆ. ಮಾರುಕಟ್ಟೆಯಲ್ಲಿರುವ ಪೂರಕದಲ್ಲಿ ಪ್ರಯೋಜನ ಹೊಂದಿರುವ ಏಕೈಕ ಪೂರಕ ಎಂದರೆ ಅದು ವೀಗನ್ಗಳಿಗೆ ಇರುವ ಬಿ 12. ವೀಗನ್ಗಳು (ಹಾಲಿನ ಉತ್ಪನ್ನವನ್ನು ಸೇವಿಸದವರು) ಹೆಚ್ಚಿನ ಮಟ್ಟದ ಕಬ್ಬಿಣ- ಸಮೃದ್ಧ ಆಹಾರ ಸೇವನೆ ಮಾಡದೇ ಇರುವುದರಿಂದ ಅವರಿಗೆ ಇದು ಲಾಭವಾಗುತ್ತದೆ. ಇದೇ ವೇಳೆ ಎಲ್ಲಾ ಅನಾರೋಗ್ಯಕರ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳ ಆಯ್ಕೆ ಕುರಿತು ಶಿಕ್ಷಣ ನೀಡಬೇಕಿದೆ.