ಬೇಸಿಗೆ ಬಂತೆಂದರೆ ಸಾಕು ಬಿಸಿಲಿನ ಬೇಗೆಗೆ ದೇಹ ಬಲುಬೇಗ ದಣಿಯುತ್ತದೆ. ಈ ಬೇಗೆ ಕೇವಲ ಪ್ರಾಣಿ ಸಂಕುಲಕ್ಕೆ ಮಾತ್ರವಲ್ಲ, ಆಹಾರ ಪದಾರ್ಥಗಳ ಮೇಲೂ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಹಾಲು, ಬೇಗ ಹಾಳಾಗುವುದನ್ನು ಕಾಣಬಹುದು. ಹಾಲನ್ನು ಕಾಲಕಾಲಕ್ಕೆ ಕಾಯಿಸದೇ ಹೋದರೆ ಅದು ಒಡೆದು ಹುಳಿಯಾಗುತ್ತದೆ. ಇದನ್ನು ತಪ್ಪಿಸಲು ಫ್ರಿಡ್ಜ್ನಲ್ಲಿಟ್ಟರೂ ರುಚಿ ಬದಲಾಗಿ, ಬಳಸಲು ಯೋಗ್ಯವಾಗುವುದಿಲ್ಲ. ಈ ರೀತಿ ಹುಳಿ ಬಂದ ಮೊಸರಿನಲ್ಲಿ ಕೆಲವು ಸ್ವಾದಿಷ್ಟ ಆಹಾರಗಳನ್ನು ತಯಾರಿಸುವ ಮೂಲಕ ಅದು ವ್ಯರ್ಥವಾಗುವುದನ್ನು ತಪ್ಪಿಸಬಹುದು.
- ಹುಳಿ ಬಂದ ಮೊಸರನ್ನು ಕೆಲವು ಅಡುಗೆಗೆ ಬಳಕೆ ಮಾಡುವುದರಿಂದ ಅದು ಆಹಾರದ ರುಚಿ ಮತ್ತು ಮೃದುತ್ವ ಹೆಚ್ಚಿಸುತ್ತದೆ.
- ಸಾಮಾನ್ಯವಾಗಿ ಇಡ್ಲಿ ಮತ್ತು ದೋಸೆಯ ಹಿಟ್ಟು ರಾತ್ರಿ ವೇಳೆ ಹುದುಗುವಿಕೆಗೆ ಒಳಗಾಗುತ್ತದೆ. ಇದರಿಂದ ರುಚಿ ಹೆಚ್ಚುತ್ತದೆ. ಒಂದು ವೇಳೆ ರಾತ್ರಿಯೆಲ್ಲಾ ಈ ಪ್ರಕ್ರಿಯೆಗೆ ಬಿಡಲು ಸಮಯವಿಲ್ಲ. ತಕ್ಷಣಕ್ಕೆ ಇಡ್ಲಿ, ದೋಸೆ ಬೇಕೆಂದರೆ ಆ ಹಿಟ್ಟಿಗೆ ಮೊಸರು ಮತ್ತು ನೀರು ಸೇರಿಸಿ. ಇದರಿಂದ ಆಹಾರದ ಮೃದುತ್ವ ಜೊತೆಗೆ ಸ್ವಾದಿಷ್ಟವೂ ಹೆಚ್ಚುತ್ತದೆ.
- ಡೊಕ್ಲಾದಂತಹ ಆಹಾರ ತಯಾರಿಸಲಯ ಸಾಮಾನ್ಯ ಮೊಸರಿನ ಬದಲು ಹುಳಿ ಮೊಸರನ್ನು ಸೇರಿಸುವುದರಿಂದ ಮತ್ತಷ್ಟ ಸಾಫ್ಟ್ ಮಾಡಬಹುದು. ಅಲ್ಲದೇ, ಇದರಿಂದ ನಿಮ್ಮ ಆಹಾರ ಹೆಚ್ಚು ರುಚಿಕರವಾಗುತ್ತದೆ.
- ಅನೇಕರು ಬೇಳೆಗಳ ಹಿಟ್ಟು, ರಾಗಿ ಹಿಟ್ಟು ಮತ್ತು ರವೆಯಿಂದ ದಿಢೀರ್ ದೋಸೆ ಮಾಡುವುದು ಕಾಣಬಹುದು. ಈ ಹಿಟ್ಟಿಗೆ ನೀರಿನ ಜೊತೆಗೆ ಮೊಸರು ಹಾಕಿ ಕಲಸುವುದರಿಂದ ದೋಸೆ ತತ್ಕ್ಷಣಕ್ಕೆ ಮೃದುವಾಗಿಯೂ, ಟೇಸ್ಟಿಯಾಗಿಯೂ ಇರುತ್ತದೆ.
- ಚೋಲೆ ಬಟೂರಾ, ಬದನೆಕಾಯಿ, ದಹಿ ಆಲೂ ರೀತಿಯ ಪಲ್ಯಗಳಿಗೆ ಕಡಲೆಬೀಜ, ಎಳ್ಳು, ಕೊಬ್ಬರಿಯನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತೇವೆ. ಅದಕ್ಕೆ ಕೊಂಚ ಮೊಸರು ಸೇರಿಸುವುದರಿಂದ ಈ ಪಲ್ಯಗಳು ಗಟ್ಟಿಯಾಗಿ ಸ್ವಾದಿಷ್ಟವಾಗಲು ಸಾಧ್ಯವಿದೆ.
- ಸಾಮಾನ್ಯ ಮೊಸರಿನ ಬದಲಾಗಿ ಹುಳಿ ಮೊಸರಿನಿಂದಲೂ ಯೋಗರ್ಟ್ ತಯಾರಿಸಬಹುದು. ಈ ಹುಳಿ ನಿಮ್ಮ ಬಾಯಿ ರುಚಿ ಕೆಡಿಸುತ್ತದೆ ಎಂದರೆ ಅದಕ್ಕೆ ಜೀರಿಗೆ, ಕಡಲೆಬೀಜ, ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿ ಜೊತೆಗೆ ಬೆಳ್ಳುಳ್ಳಿ ಎಸಳುಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದು, ಯೋಗರ್ಟ್ಗೆ ಬೆರೆಸಿ.
- ಬ್ರೆಡ್ ಮತ್ತು ಇತರೆ ಬೇಕಿಂಗ್ ಆಹಾರಗಳ ಹಿಟ್ಟಿಗೂ ಕೂಡ ಯೀಸ್ಟ್ ಬದಲಾಗಿ ಹುಳಿ ಮೊಸರನ್ನು ಬಳಕೆ ಮಾಡಬಹುದು. ಇದರಲ್ಲಿನ ಪ್ರೊಬಯೊಟೆಕ್ ಅಂಶಗಳು ಹೊಟ್ಟೆಯ ಆರೋಗ್ಯಕ್ಕೆ ಸಹಾಯ ಮಾಡಿ, ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
- ಫ್ರೆಂಚ್ ಫ್ರೈಸ್, ಚಿಕನ್ ವಿಂಗ್ಸ್ ಮತ್ತು ಸಲಾಡ್, ಕ್ರೀಮ್ ಚೀಸ್ಗಳು ಬಹುತೇಕ ಮಂದಿಗೆ ಇಷ್ಟ. ಇವುಗಳ ತಯಾರಿಕೆಯಲ್ಲೂ ಕೂಡ ಹುಳಿ ಮೊಸರನ್ನು ಬಳಕೆ ಮಾಡುವುದರಿಂದ ರುಚಿ ಸಖತ್ ಹೆಚ್ಚುತ್ತದೆ.
- ಬೇಸಿಗೆಯಲ್ಲಿ ದಾಹ ತಣಿಸುವ ಮಜ್ಜಿಗೆ ಅನೇಕ ಮಂದಿಗೆ ಬಲು ಇಷ್ಟ. ಇದಕ್ಕೆ ಕೂಡ ಸಾಮಾನ್ಯ ಬದಲು ಹುಳಿ ಮೊಸರು ಬೆರೆಸಬಹುದು.
- ಹುಳಿ ಮೊಸರನ್ನು ಕೇವಲ ಆಹಾರ ಪದಾರ್ಥಗಳಿಗೆ ಮಾತ್ರ ಬಳಕೆ ಮಾಡದೇ ಅದನ್ನು ಗಿಡಗಳ ಬೆಳವಣಿಗೆಯಲ್ಲೂ ಬಳಸಬಹುದು ಎನ್ನುತ್ತಾರೆ ತಜ್ಞರು. ಐದು ಲೀಟರ್ ನೀರಿಗೆ ಒಂದು ಕಪ್ ಮೊಸರು ಬಳಸಿ ಅದನ್ನು ಗಿಡಗಳಿಗೆ ಸಿಂಪಡಿಸುವುದರಿಂದ ಗಿಡಗಳಿಗೆ ಉತ್ತಮ ಪೋಷಕಾಂಶ ಲಭ್ಯವಾಗುತ್ತದೆ. ಆರೋಗ್ಯಕರವಾಗಿ ಬೆಳೆಯುತ್ತದೆ.
- ಈ ಹುಳಿ ಮೊಸರನ್ನು ಸೌಂದರ್ಯ ಚಿಕಿತ್ಸೆಗಳನ್ನು ಬಳಸಬಹುದು. ಫೇಸ್ ಪ್ಯಾಕ್ ಮತ್ತು ಹೇರ್ ಪ್ಯಾಕ್ನಲ್ಲಿ ಬಳಕೆ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಕಾಂತಿ ನೀಡುತ್ತದೆ. ಇದರಲ್ಲಿನ ಲ್ಯಾಕ್ಟಿಕ್ ಆಮ್ಲ ತ್ವಚೆಯ ಆರೋಗ್ಯ ಕಾಪಾಡುವಂತೆ ಮಾಡುತ್ತದೆ.
- ಅನೇಕರಿಗೆ ಕೂದಲು ಉದುರುವ ಸಮಸ್ಯೆ ಸಾಮಾನ್ಯ. ಆಗ ಕೂದಲಿನ ಬುಡಕ್ಕೆ ಹುಳಿ ಮೊಸರನ್ನು ಹಚ್ಚುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಬಿ5 ಮತ್ತು ಡಿ ವಿಟಮಿನ್ ಇದರಲ್ಲಿದ್ದು, ಜಿಂಕ್, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಅಮಿನೊ ಆಮ್ಲಗಳು ಇದರಲ್ಲಿದ್ದು, ಕೂದಲಿನ ಬುಡವನ್ನು ಆರೋಗ್ಯವಾಗಿಡುತ್ತದೆ. ಜೊತೆಗೆ, ಫಂಗಲ್ನಂತಹ ಸೋಂಕಿನಿಂದ ಪಾರು ಮಾಡುತ್ತದೆ.
- ಪೊಟಾಶಿಯಂ ಮತ್ತು ಮೆಗ್ನಿಶಿಯಂ ಹುಳಿ ಮೊಸರಿನಲ್ಲಿ ಇರುವುದರಿಂದ ಬಿಪಿ ನಿಯಂತ್ರಣವಾಗುತ್ತದೆ. ಜೊತೆಗೆ ಇದು ಹೃದಯದ ಆರೋಗ್ಯಕ್ಕೆ ಉತ್ತಮ.