ವಾಷಿಂಗ್ಟನ್: ಪೋಷಕರು ಯಾವಾಗಲಾದರೂ ತಾವು ಊಟ ಮಾಡುವಾಗ, ಫೋನ್ ಕರೆ ಮಾಡುವಾಗ ಅಥವಾ ಇನ್ನಾವುದೋ ಮುಖ್ಯ ಕೆಲಸ ಮಾಡುತ್ತಿದ್ದಾಗ ಮಗು ಒಂದೇ ಸಮನೇ ಅಳಲಾರಂಭಿಸಿದರೆ ಆಗ ಪೋಷಕರಿಗೆ ಕಿರಿಕಿರಿಯಾಗುವುದು ಸಹಜ. ಇಂಥ ಸಂದರ್ಭದಲ್ಲಿ ಮಗುವಿಗೆ ಮೊಬೈಲ್ ಅಥವಾ ಇನ್ನಾವುದೋ ಡಿಜಿಟಲ್ ಸಾಧನವೊಂದನ್ನು ಕೊಟ್ಟರೆ ಸಾಕು ಅದು ಸುಮ್ಮನಾಗಿಬಿಡುತ್ತೆ.
ಆದರೆ, ಮಗುವಿಗೆ ಹೀಗೆ ಮೊಬೈಲ್ ಕೊಡುವುದರಿಂದ ಭವಿಷ್ಯದಲ್ಲಿ ಮಕ್ಕಳ ನಡವಳಿಕೆಯಲ್ಲಿ ಗಂಭೀರ ದುಷ್ಪರಿಣಾಮಗಳನ್ನು ಬೀರಬಹುದು ಎನ್ನುತ್ತಾರೆ ಸಂಶೋಧಕರು. 3-5 ವರ್ಷ ವಯಸ್ಸಿನ ಮಕ್ಕಳನ್ನು ಶಾಂತಗೊಳಿಸಲು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂಥ ಸಾಧನಗಳನ್ನು ಆಗಾಗ ನೀಡುವುದು ಮಕ್ಕಳಲ್ಲಿ, ವಿಶೇಷವಾಗಿ ಗಂಡು ಮಕ್ಕಳಲ್ಲಿ ಹೆಚ್ಚಿನ ಭಾವನಾತ್ಮಕ ಅನಿಯಂತ್ರಣದೊಂದಿಗೆ ಸಂಬಂಧಿಸಿದೆ ಎಂದು JAMA ಪೀಡಿಯಾಟ್ರಿಕ್ಸ್‌ನ ಮಿಚಿಗನ್ ಮೆಡಿಸಿನ್ ಅಧ್ಯಯನ ಹೇಳಿದೆ.
ಇದು ನಿರುಪದ್ರವಿ ಎನಿಸಬಹುದು ಆದರೆ ಭಾರಿ ಅಪಾಯಕಾರಿ:ಚಿಕ್ಕ ಮಗುವನ್ನು ಸಮಾಧಾನಪಡಿಸಲು ಮೊಬೈಲ್ ಸಾಧನಗಳನ್ನು ಬಳಸುವುದು ನಿರುಪದ್ರವಿ, ತಾತ್ಕಾಲಿಕ ಸಾಧನವಾಗಿ ಕಾಣಿಸಬಹುದು. ಆದರೆ, ಇದು ನಿಯಮಿತವಾಗಿ ಬಳಸಲಾಗುವ ತಂತ್ರವಾದರೆ ದೀರ್ಘಾವಧಿಯ ಪರಿಣಾಮಗಳು ಉಂಟಾಗಬಹುದು ಎಂದು ಪ್ರಮುಖ ಲೇಖಕ ಜೆನ್ನಿ ರಾಡೆಸ್ಕಿ, ಎಂ.ಡಿ. ಹೇಳುತ್ತಾರೆ. ಇವರು ಯುನಿವರ್ಸಿಟಿ ಆಫ್ ಮಿಚಿಗನ್ ಹೆಲ್ತ್ C.S. ಮೋಟ್ ಚಿಲ್ಡ್ರನ್ಸ್ ಹಾಸ್ಪಿಟಲ್‌ನಲ್ಲಿ ಬೆಳವಣಿಗೆಯ ನಡವಳಿಕೆಯ ಶಿಶು ವೈದ್ಯರಾಗಿದ್ದಾರೆ.