ನವದೆಹಲಿ: ಚಳಿಗಾಲದ ಆರಂಭದಲ್ಲೇ (ನವೆಂಬರ್ 2ರಂದು) ದೆಹಲಿ ಮಾಲಿನ್ಯ ಮಟ್ಟವು ಪಿಎಂ2.5 ಸಾಂದ್ರತೆ ತಲುಪಿದ್ದು, ವಾಯುಗುಣಮಟ್ಟ ಏರಿಕೆಯಾಗುತ್ತಲೇ ಇದೆ. ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸಾಂದ್ರತೆಯ ಶ್ರೇಣಿಯ ಪ್ರಕಾರ ಇದು ಕಳಪೆಯಾಗಿದೆ ಎಂದು ಪರಿಸರ ವಿಜ್ಞಾನ ಕೇಂದ್ರ (ಸಿಎಸ್‌ಇ) ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಈ ಮೂಲಕ ದೆಹಲಿ ವಾಯು ಗುಣಮಟ್ಟ ಹದಗೆಡುವಿಕೆಗೆ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಮಾತ್ರ ಕಾರಣವಾಗುತ್ತಿಲ್ಲ. ವಾಹನದ ಹೊಗೆಯೂ ಸೇರಿದಂತೆ ಇತರೆ ಅಂಶಗಳು ಗಾಳಿ ವಿಷಪೂರಿತವಾಗಲು ಕಾರಣ ಎಂದಿದೆ.
ದೆಹಲಿ-ಎನ್ಸಿಆರ್ನಲ್ಲಿ ಚಳಿಗಾಲ ಮಾಲಿನ್ಯದ ಕುರಿತು ಸಿಎಸ್‌ಇ ಹೊಸ ವಿಶ್ಲೇಷಣಾತ್ಮಕ ವರದಿ ಬಿಡುಗಡೆ ಮಾಡಿದೆ. ಈ ಕುರಿತು ಮಾತನಾಡಿರುವ ಸಿಎಸ್‌ಇ ಕಾರ್ಯನಿರ್ವಾಹಕ ನಿರ್ದೇಶಕಿ, ಸಂಶೋಧನಾ ಮತ್ತು ಸಲಹೆಗಾರರಾಗಿರುವ ಅನುಮಿತಾ ರಾಯ್ ಚೌಧರಿ, ಕಳೆದ ನವೆಂಬರ್ಗೆ ಹೋಲಿಕೆ ಮಾಡಿದಾಗ ಈ ಬಾರಿಯ ಚಳಿಗಾಲದ ಮಾಲಿನ್ಯ ಹೆಚ್ಚಿದೆ. ಹವಾಮಾನ, ಕೃಷಿ ತ್ಯಾಜ್ಯ ಸುಡುವಿಕೆ ಮತ್ತು ಸ್ಥಳೀಯ ಮಾಲಿನ್ಯಗಳು ಸಾರ್ವಜನಿಕ ಆರೋಗ್ಯದ ಅಪಾಯ ಹೆಚ್ಚಿಸಿ, ಅಪಾಯಕಾರಿ ಪರಿಸ್ಥಿತಿ ಸೃಷ್ಟಿಸುತ್ತದೆ.
ದೆಹಲಿಯ ಮಾಲಿನ್ಯವೂ ಸ್ಥಿರ ಮತ್ತು ಕೆಳಮುಖವಾಗಲು ರಾಷ್ಟ್ರ ರಾಜಧಾನಿಯಲ್ಲಿ ಕೆಲವು ಮಾನದಂಡಗಳನ್ನು ಜಾರಿಗೆ ತರುವುದು ಅಗತ್ಯ. ಇದು ವಾಹನ, ಉದ್ಯಮ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಪ್ರಮುಖ ಅಂಶಗಳಲ್ಲಿ ಅತ್ಯಂತ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವರದಿ ಹೇಳಿದೆ.