ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ಮುಖ ಮತ್ತು ದೇಹದಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ. ಚರ್ಮವು ಸುಕ್ಕುಗಟ್ಟುತ್ತದೆ ಮತ್ತು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ. ದೇಹದ ಆಕಾರ ಕೂಡ ಬದಲಾಗುತ್ತಾ ಹೋಗುತ್ತದೆ. ಆದರೆ, ನಮ್ಮ ದೈನಂದಿನ ಅಭ್ಯಾಸಗಳು ಮತ್ತು ಜೀವನಶೈಲಿ ಸರಿಯಾಗಿ ಪಾಲಿಸಿದರೇ, ವಯಸ್ಸಾದರೂ ಸುಂದರವಾಗಿ ಮತ್ತು ಯಂಗ್ ಆಗಿ ಕಾಣಬಹುದಾಗಿದೆ. ಇದಕ್ಕಾಗಿ ನಿತ್ಯ ಈ ಟಿಪ್ಸ್ಗಳನ್ನು ಸರಿಯಾಗಿ ಪಾಲಿಸಿದರೆ ಯೌವನವನ್ನು ಮರಳಿ ಪಡೆಯಬಹುದಾಗಿದೆ.
ಸರಿಯಾದ ನಿದ್ರೆ:ಉತ್ತಮ ಆರೋಗ್ಯಕ್ಕೆ ನಿದ್ರೆ ತುಂಬಾ ಅಗತ್ಯ. ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡದಿದ್ದರೆ ನಮ್ಮ ದೇಹದಲ್ಲಿ ಕಾರ್ಟಿಸಾಲ್ ಹಾರ್ಮೋನ್ ಹೆಚ್ಚಾಗಿ ದೇಹವು ಹಾನಿಗೊಳಗಾಗುತ್ತದೆ. ಜತೆಗೆ ನಮ್ಮ ಚರ್ಮವು ಸುಕ್ಕುಗಟ್ಟುತ್ತಾ ಹೋಗುತ್ತದೆ. ಬಹುಬೇಗ ವಯಸ್ಸಾದ ಲಕ್ಷಣಗಳು ಕಂಡು ಬರುತ್ತವೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡುವುದು ಅತಿ ಮುಖ್ಯವಾಗಿದೆ. ವಯಸ್ಕರು ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳು ಕಾಲ ನಿದ್ರೆ ಮಾಡಬೇಕು. ಮಕ್ಕಳು ಕನಿಷ್ಠ 8 ರಿಂದ 12 ಗಂಟೆಗಳು ಕಾಲ ನಿದ್ರಿಸಬೇಕು. ಇದರಿಂದ ನಮ್ಮ ದೇಹಕ್ಕೆ ವಿಶ್ರಾಂತಿ ಜತೆಗೆ ಮಾನಸಿಕ ಒತ್ತಡ ಕಡಿಮೆಯಾಗಿ ನಾವು ಯೌವನವಾಗಿ ಕಾಣುತ್ತೇವೆ.
ಧೂಮಪಾನದಿಂದ ದೂರವಿರಿ:ಧೂಮಪಾನಆರೋಗ್ಯದ ಜತೆಗೆ ಚರ್ಮಕ್ಕೂ ಹಾನಿಕಾರಕ. ತಂಬಾಕು ಸೇವನೆಯಿಂದ ವೃದ್ಧಾಪ್ಯದ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ಸಿಗರೇಟ್ ಕೇವಲ ಚರ್ಮಕ್ಕೆ ಮಾತ್ರವಲ್ಲದೇ ಶ್ವಾಸಕೋಶಕ್ಕೂ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಸಿಗರೇಟ್ ವ್ಯಸನದಿಂದ ಆದಷ್ಟು ಬೇಗ ಮುಕ್ತರಾಗಿ. ಇದನ್ನು ತ್ಯಜಿಸುವುದರಿಂದ ನಮ್ಮ ಮೆದುಳು ಚುರುಕುಗೊಳ್ಳುತ್ತದೆ. ಆಲೋಚನಾ ಶಕ್ತಿ ಕೂಡ ಸುಧಾರಿಸುತ್ತದೆ.
ಬಿಸಿಲಿನ ಕಿರಣಗಳಿಂದ ರಕ್ಷಿಸಿಕೊಳ್ಳಿ: ಹೆಚ್ಚು ಬಿಸಿಲಲ್ಲಿ ಕಾಲ ಕಳೆಯುವವರೂ ಚರ್ಮದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ತ್ವಚೆ ಕಳೆಗುಂದುತ್ತದೆ ಮತ್ತು ಬಣ್ಣ ಕಳೆದುಕೊಳ್ಳುತ್ತದೆ. ಸುಕ್ಕುಗಳು ಮತ್ತು ಕಲೆಗಳು ಕಾಣಿಸಿಕೊಳ್ಳುತ್ತವೆ. ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಕಂಪನಿಯ ಸನ್ಸ್ಕ್ರೀನ್ಗಳನ್ನು ಬಳಸಿ.
ಇವುಗಳಿಂದ ದೂರವಿರಿ:ನಿದ್ರಾ ಸಮಸ್ಯೆ ಇರುವವರು ಮಲಗುವ ಮುನ್ನ ಆಲ್ಕೋಹಾಲ್ ಮತ್ತು ಕೆಫೀನ್ ಸೇವಿಸಬಾರದು. ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಆದಷ್ಟು ದೂರವಿರಿ. ಪ್ರಸ್ತುತ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ಕಳೆಯುತ್ತಿದ್ದಾರೆ. ಕೆಲವರು ವೃತ್ತಿಪರವಾಗಿ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ಪರದೆಯ ಹಿಂದೆ ಕಾಲ ಕಳೆಯಲು ಈ ಸಾಧನಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದು ನಮ್ಮ ಕಣ್ಣುಗಳ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡುವ ಮೂಲಕ ಸೃಷ್ಟಿಯಾಗುವ ಅಲೆಗಳು ನಮ್ಮ ಮೆದುಳಿನ ಮೇಲೂ ತೀವ್ರ ಪರಿಣಾಮ ಬೀರುತ್ತವೆ. ಇದರಿಂದ ವಯಸ್ಸಾದ ಲಕ್ಷಣಗಳು ಬಹುಬೇಗ ಗೋಚರಿಸುತ್ತವೆ.