ವ್ಯಾಯಾಮದ ಕೊರತೆ, ಧೂಮಪಾನ, ಬೆಳಗ್ಗೆ 9ರಿಂದ ಸಂಜೆ 5ರವರೆಗೆ ದೀರ್ಘ ಗಂಟೆಗಳ ಕಾಲ ಕುಳಿತಿರುವುದು, ಬಿಡುವಿಲ್ಲದೇ ಹೆಚ್ಚು ಸಮಯ ಕೆಲಸ ಮಾಡುವುದರಿಂದಾಗಿ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಜನರು ತುತ್ತಾಗುವ ಸಾಧ್ಯತೆಯಿದೆ. ಇದರಿಂದ ಯುವಕರು ಪಾರ್ಶ್ವವಾಯುವಿಗೂ ತುತ್ತಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ನರವಿಜ್ಞಾನದ (neurology) ಎಚ್ಒಡಿ ಪ್ರೊ.ಆರ್.ಕೆ ಗಾರ್ಗ್ ಪ್ರಕಾರ, "ಅಧಿಕ ರಕ್ತದೊತ್ತಡದಿಂದಾಗಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪಾರ್ಶ್ವವಾಯು (ಸ್ಟ್ರೋಕ್) ಪ್ರಕರಣಗಳು ಹೆಚ್ಚಿವೆ" ಎಂದು ತಿಳಿಸಿದ್ದಾರೆ.
"40 ರಿಂದ 50 ವರ್ಷ ವಯಸ್ಸಿನ ಜನರು ತಮ್ಮ ವೃತ್ತಿಜೀವನದಲ್ಲಿ ಮುಂದುವರೆಯಲು ಶ್ರಮಿಸುತ್ತಿದ್ದಾರೆ. ಕಚೇರಿಯಲ್ಲಿ ಹೆಚ್ಚಿದ ಕೆಲಸದ ಒತ್ತಡ, ಮನೆಯಲ್ಲಿ ಅನಿಯಮಿತ ಆಹಾರ ಪದ್ಧತಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದ ಅವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗುತ್ತಾರೆ. ಅಧಿಕ ರಕ್ತದೊತ್ತಡವು ಅವರನ್ನು ಪಾರ್ಶ್ವವಾಯುವಿಗೆ ಗುರಿಯಾಗುವಂತೆ ಮಾಡುತ್ತದೆ" ಎಂದು ಗಾರ್ಗ್ ವಿವರಿಸಿದ್ದಾರೆ.
"ಇಂತಹ ರೋಗಲಕ್ಷಣಗಳು ಕಂಡುಬಂದಾಗ ಜನರು ಕೆಲಸದ ಹೊರೆಯಿಂದ ಎಂದು ಭಾವಿಸುತ್ತಾರೆ. ಆದರೆ, ಸ್ಟ್ರೋಕ್ ಬರುವುದಕ್ಕೂ ಮುಂಚಿನ ಎಚ್ಚರಿಕೆ ಗಂಟೆಗಳು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಈ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು" ಎಂದು ಹೇಳಿದರು.
"ಸ್ಟ್ರೋಕ್ನ ಲಕ್ಷಣಗಳೆಂದರೆ, ಮುಖ, ತೋಳು ಅಥವಾ ಕಾಲಿನಲ್ಲಿ, ವಿಶೇಷವಾಗಿ ದೇಹದ ಒಂದು ಬದಿಯಲ್ಲಿ ಹಠಾತ್ ಮರಗಟ್ಟುವಿಕೆ ಅಥವಾ ಒಂದು ರೀತಿಯ ದೌರ್ಬಲ್ಯ ಕಾಣಿಸುತ್ತದೆ. ಸಡನ್ ಆಗಿ ಗೊಂದಲ ಉಂಟಾಗುವುದು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ತೊಂದರೆ, ಹಠಾತ್ ಆಗಿ ಕಣ್ಣು ಕಾಣಿಸದೇ ಇರುವುದು, ನಡಿಗೆಯಲ್ಲಿ ತೊಂದರೆ, ತಲೆತಿರುಗುವಿಕೆ, ಬ್ಯಾಲೆನ್ಸ್ ತಪ್ಪುವುದು ಅಥವಾ ಸಮನ್ವಯತೆ, ಸಡನ್ ಆಗಿ ತಲೆನೋವು ಕಾಣಿಸಿಕೊಳ್ಳುವುದು ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳು" ಎಂದು ಗಾರ್ಗ್ ತಿಳಿಸಿದ್ದಾರೆ.