ನಿದ್ದೆ ಮಾಡುವಾಗ ನಮಗೆ ಯಾವುದೇ ಬೆಳಕು ಭಂಗ ತರಕೂಡದು. ಹಾರ್ಮೋನ್ಗಳ ಸಮತೋಲನ ಕಾಪಾಡಲು ಬಹುತೇಕ ಮಂದಿ ಸ್ಲೀಪ್ ಮಾಸ್ಕ್ ಬಳಸುವುದುಂಟು. ಮಲಗುವ ಸಮಯದಲ್ಲಿ ಕಣ್ಣಿನ ಮೇಲೆ ಹಾಕುವ ಈ ಮಾಸ್ಕ್ನಿಂದ ಗಾಢ ಕತ್ತಲೆ ಆವರಿಸಿ ಬೇಗ ನಿದ್ರೆ ಬರುತ್ತದೆ. ಹೀಗಾಗಿ, ಉತ್ತಮ ಗುಣಮಟ್ಟದ ನಿದ್ದೆಗಿದು ಸಹಾಯಕ. ಅದರಲ್ಲೂ ಪ್ರಯಾಣದ ಸಂದರ್ಭದಲ್ಲಿ ಮಲಗುವಾಗ ಯಾವುದೇ ಅಡಚಣೆ ಇಲ್ಲದೇ ನಿದ್ರೆಗೆ ಜಾರಲು ಇದರ ಬಳಕೆ ಹೆಚ್ಚು. ಸ್ಲೀಪ್ ಮಾಸ್ಕ್ಗಳು ಕೇವಲ ನಿದ್ರೆಗೆ ಮಾತ್ರವಲ್ಲ, ಮಿದುಳಿನ ಅರಿವಿನ ಸಾಮರ್ಥ್ಯವನ್ನೂ ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ.
ನಿದ್ದೆ ಮಾಡುವ ಸಮಯವು ಹೆಚ್ಚು ನಿರ್ಣಾಯಕ. ಈ ವೇಳೆ ಮಿದುಳು ಜಾಗರೂಕತೆಯಿಂದ ಹೊಸ ಮಾಹಿತಿಗಳನ್ನು ಮಿದುಳಿಗೆ ಎನ್ಕೋಡ್ ಮಾಡುತ್ತದೆ. ನಿದ್ದೆಯ ಸಮಯದಲ್ಲಿ ಕೋಣೆಯಲ್ಲಿ ಉರಿಯುವ ಸಣ್ಣ ದೀಪ, ಕಿಟಕಿಯಿಂದ ನಿದ್ರೆಗೆ ಅಡ್ಡಿಪಡಿಸುವ ಬೀದಿದೀಪದ ಬೆಳಕುಗಳು ಅಡ್ಡಿಪಡಿಸುತ್ತದೆ. ಇಂಥ ಸಂದರ್ಭದಲ್ಲಿ ಸ್ಲೀಪ್ ಮಾಸ್ಕ್ ಧರಿಸಿ ಮಲಗುವುದರಿಂದ ಈ ರೀತಿಯ ಬೆಳಕನ್ನು ನಿರ್ಬಂಧಿಸಿ, ಅದು ಸ್ಮರಣಶಕ್ತಿ ವೃದ್ಧಿಗೆ ಸಹಾಯ ಮಾಡುತ್ತದೆ ಎನ್ನುವುದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿರುವ ಅಂಶ.
ರಾತ್ರಿಯಿಡೀ ಈ ರೀತಿಯ ಸ್ಲೀಪ್ ಮಾಸ್ಕ್ ಧರಿಸಿ ನಿದ್ರಿಸುವುದರಿಂದ ಮರುದಿನಕ್ಕೆ ಮಿದುಳನ್ನು ಎನ್ಕೋಡಿಂಗ್ ಮಾಡಲು ಇದು ನೆರವಾಗುತ್ತದೆ ಎಂದು ಕಾರ್ಡಿಫ್ ಯೂನಿವರ್ಸಿಟಿಯ ಮನಶಾಸ್ತ್ರಜ್ಞ ವಿವಿಯನ್ ಗ್ರೇಸ್ ತಿಳಿಸಿದ್ದಾರೆ. ಈ ಕುರಿತಾಗಿ ಸಂಶೋಧನಾ ಪತ್ರಿಕೆ ಮಂಡಿಸಿರುವ ಅವರು, ನಿದ್ರೆಯ ಮಾಸ್ಕ್ಗಳು ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಲು ಎರಡು ರೀತಿ ಪ್ರಯೋಗಗಳನ್ನು ನಡೆಸಿರುವುದಾಗಿ ತಿಳಿಸಿದ್ದಾರೆ.