ಹೆಣ್ಣಿಗೆ ತಾಯ್ತತನವು ಅವಳ ಪುನರ್ಜನ್ಮ ಎಂದೇ ಜನಜನಿತವಾಗಿದೆ. ಈ ಹಂತವು ಅವಳನ್ನು ಹೆಣ್ಣಿನಿಂದ ಒಬ್ಬಳು ತಾಯಿಯನ್ನಾಗಿ ಪರಿವರ್ತಿಸುತ್ತದೆ. ಹೆರಿಗೆಯ ವೇಳೆ ಮಗುವು ಆರೋಗ್ಯವಂತವಾಗಿ ಹಾಗೂ ಯಾವುದೇ ಸಮಸ್ಯೆಗಳಿಲ್ಲದೇ ಜನಿಸಲು, ತಾಯಿಯು ಆರೋಗ್ಯವಂತಳಾಗಿ ಹಾಗೂ ರೋಗಮುಕ್ತಳಾಗಿ ಇರುವುದು ತುಂಬಾ ಮುಖ್ಯವಾಗಿದೆ. ಕೆಲವೊಮ್ಮೆ, ಹೆಣ್ಣು ಗರ್ಭಾವಸ್ಥೆಯಲ್ಲಿರುವಾಗ ಅಧಿಕ ರಕ್ತದೊತ್ತಡ ಮತ್ತು ಉಸಿರುಕಟ್ಟುವಿಕೆಯಂತಹ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.
ಇತ್ತೀಚೆಗೆ ಅಮೆರಿಕನ್ ಥೊರಾಸಿಕ್ ಸೊಸೈಟಿಯು ಆನ್ಲೈನ್ನಲ್ಲಿ ಅಧ್ಯಯನ ನಡೆಸಿದ್ದು, ಇದನ್ನು 'ಅಮೆರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್'ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಗರ್ಭಾವಸ್ಥೆಯಲ್ಲಿರುವ ಮಹಿಳೆ ನಿದ್ರಿಸುವಾಗ ಯಾವ ರೀತಿ ಉಸಿರಾಟದ ಸಮಸ್ಯೆ ಎದುರಿಸುತ್ತಾಳೆ ಮತ್ತು ಅದರಿಂದ ಏನೇನು ಆಗುತ್ತದೆ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ.
ಮೆಟಾಬಾಲಿಕ್ ಸಿಂಡ್ರೋಮ್ ಹೊಂದಿರುವ ಮಹಿಳೆಯರಲ್ಲಿ ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದಂತಹ ಅಪಾಯ ಹೆಚ್ಚಿರುತ್ತದೆ. "ಸ್ಲೀಪ್ ಡಿಸಾರ್ಡರ್ಡ್ ಬ್ರೀಥಿಂಗ್ ಇನ್ ಪ್ರೆಗ್ನೆನ್ಸಿ ಆ್ಯಂಡ್ ಪೋಸ್ಟ್ ಡೆಲಿವರಿ: ಅಸೋಸಿಯೇಷನ್ಸ್ ವಿಥ್ ಕಾರ್ಡಿಯೋಮೆಟಾಬಾಲಿಕ್ ಹೆಲ್ತ್" ಎಂಬ ಹೆಸರಿನಡಿ ಫ್ರಾನ್ಸೆಸ್ಕಾ ಎಲ್. ಫ್ಯಾಕೊ, ಎಂ ಡಿ, ಸಹಾಯಕ ಪ್ರಾಧ್ಯಾಪಕರು, ಸ್ತ್ರೀರೋಗ ತಜ್ಞರು ಮತ್ತು ಸಂತಾನೋತ್ಪತ್ತಿ ವಿಜ್ಞಾನ ವಿಭಾಗ, ಮಾತೃ-ಭ್ರೂಣದ ಔಷಧ ವಿಭಾಗ, ಯುಪಿಎಂಸಿ ಮ್ಯಾಗೀ-ಮಹಿಳೆಯರ ಆಸ್ಪತ್ರೆ, ಪಿಟ್ಸ್‌ಬರ್ಗ್ ಮತ್ತು ಸಹೋದ್ಯೋಗಿಗಳು ಸ್ಲೀಪ್ ಅಪ್ನಿಯ ಎಂಬ ಅಧ್ಯಯನ ನಡೆಸಿದ್ದಾರೆ.
ಈ ಒಂದು ಅಧ್ಯಯನದಲ್ಲಿ ಎರಡು ಗುಂಪಿನ ಮಹಿಳೆಯರು ಭಾಗವಹಿಸಿದ್ದು, ಮೊದಲನೆಯದಾಗಿ 1,964 ಮಹಿಳೆಯರು ಭಾಗಿಯಾಗಿದ್ದರು. ಇವರಿಗೆ ಯಾವುದೇ ರೀತಿಯ ಹೃದಯ ಸಮಸ್ಯೆ ಇರಲಿಲ್ಲ. ಅಲ್ಲದೇ ಇವರು ಮೊದಲ ಗರ್ಭಧಾರಣೆ ಅನುಭವಿಸುತ್ತಿದ್ದರು. ಇನ್ನೂ ಎರಡನೇ ಗುಂಪಿನಲ್ಲಿ ಗರ್ಭಧಾರಣೆಯಾಗಿ 2 ರಿಂದ 7 ವರ್ಷವಾದ 1,222 ಮಹಿಳೆಯರು ಭಾಗವಹಿಸಿದ್ದರು. ಅವರು ಅಧಿಕ ರಕ್ತದೊತ್ತಡ ಅಥವಾ ಮೆಟಾಬಾಲಿಕ್ ಸಿಂಡ್ರೋಮ್ ನಂತಹ ಸಮಸ್ಯೆ ಹೊಂದಿದ್ದರು ಎಂದು ತಿಳಿದು ಬಂದಿದೆ.