ನವದೆಹಲಿ: ಭಾರತದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆ ಶೇ 27ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಆದರೂ ಅನೇಕ ಮಂದಿ ಅಂಗಾಂಗ ಕಸಿಗೆ ಕಾಯುತ್ತಿದ್ದು, ಇನ್ನೂ ಹೆಚ್ಚಿನ ಮಟ್ಟದ ಬೆಳವಣಿಗೆ ಕಾಣಬೇಕಿದೆ. ದೇಶದಲ್ಲಿ ಸುಮಾರು 50 ಸಾವಿರ ಜನರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.
ಭಾರತದಲ್ಲಿ 2022ರಲ್ಲಿ 15 ಸಾವಿರ ಅಂಗಾಂಗ ಕಸಿ ಚಿಕಿತ್ಸೆಯನ್ನು ನಡೆಸುವ ಮೂಲಕ ದಾಖಲೆ ಮಾಡಲಾಗಿದೆ. ಈ ಮೂಲಕ ಅಂಗಾಂಗ ದಾನವನ್ನು ಪ್ರೋತ್ಸಾಹಿಸುವ ಜೊತೆಗೆ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಈ ಪ್ರಗತಿಯ ನಡುವೆಯೂ ಅಂಗಾಂಗ ದಾನ ಮಾಡುವ ದರ ಸರಾಸರಿ ಮಿಲಿಯನ್ ಜನಸಂಖ್ಯೆಗೆ ಶೇ 0.52ರಷ್ಟಿದೆ. ಬೇಡಿಕೆ ಮತ್ತು ಪೂರೈಕೆ ನಡುವಿನ ಈ ಅಂತರವನ್ನು ಹೋಗಲಾಡಿಸುವ ಮತ್ತಷ್ಟು ಕ್ರಮಕ್ಕೆ ಉತ್ತೇಜನ ನೀಡಬೇಕಿದೆ.
ಬೇಡಿಕೆಯನ್ನು ಪೂರೈಸಲು ಮತ್ತು ರೋಗಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಅಂಗಾಂಗ ದಾನ ದರಗಳನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಜನರ ಜೀವ ಉಳಿಸುವಲ್ಲಿ ಅಂಗಾಂಗ ದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಗಸ್ಟ್ 13 ಅನ್ನು ವಿಶ್ವ ಅಂಗಾಂಗ ದಾನ ದಿನವನ್ನಾಗಿ ಆಚರಿಸಲಾಗುವುದು. ಈ ಮೂಲಕ ಜನರಲ್ಲಿ ಅಂಗಾಂಗ ದಾನಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಅಂಗಾಂಗ ದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕಿದೆ.