ಮೆದುಳು ನಮ್ಮ ದೇಹದ ಅವಿಭಾಜ್ಯ ಅಂಗ. ಜೀವನದುದ್ದಕ್ಕೂ ದೇಹದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವ ಜವಾಬ್ದಾರಿ ಮೆದುಳಿನದ್ದಾಗಿದೆ. ಹೀಗಾಗಿ, ಮೆದುಳಿಗಾಗುವ ಸಣ್ಣ ಹಾನಿ ಅಥವಾ ಆಘಾತವೂ, ದೇಹದ ಎಲ್ಲಾ ಕಾರ್ಯವಿಧಾನಗಳ ಮೇಲೆ ಪರಿಣಾಮ ಬೀರಬಹುದು. ಕೆಲವೊಮ್ಮೆ, ಅದರ ತೀವ್ರತೆಯು, ಆ ವ್ಯಕ್ತಿಯು ಕಾರ್ಯಚಟುವಟಿಕೆ ನಡೆಯಲು ಸಾಧ್ಯವಾಗದಂತೆ ಮಿತಿಗೊಳಿಸಬಹುದು. ಇನ್ನೊಂದು ಮುಖ್ಯ ವಿಚಾರವೆಂದರೆ, ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು ವ್ಯಕ್ತಿಯ ಲೈಂಗಿಕ ಆರೋಗ್ಯದ ಮೇಲೂ ಗಮನಾರ್ಹ ಪರಿಣಾಮ ಬೀರುತ್ತವೆ.
ಮಿದುಳಿನ ಹಾನಿ ಮನುಷ್ಯನನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ವ್ಯಕ್ತಿಯ ದೈಹಿಕ ಅಥವಾ ಲೈಂಗಿಕ ಬಯಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವ್ಯಕ್ತಪಡಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಬಗ್ಗೆ, 'ಈಟಿವಿ ಭಾರತ'ವು ಹೈದರಾಬಾದ್‌ನ ಕನ್ಸಲ್ಟೆಂಟ್ ಮೈಕ್ರೋಸರ್ಜಿಕಲ್ ಆಂಡ್ರಾಲಜಿಸ್ಟ್ ಡಾ. ರಾಹುಲ್ ರೆಡ್ಡಿ ಅವರೊಂದಿಗೆ ಮಾತನಾಡಿದೆ. ಡಾ. ರಾಹುಲ್, ಗಂಭೀರ ಅಪಘಾತ ಅಥವಾ ಕಾಯಿಲೆಯಿಂದಾಗಿ ಮಿದುಳಿಗೆ ಆಗುವ ಆಘಾತವು, ಅದರ ಕಾರ್ಯಗಳು ಮತ್ತು ಪ್ರತಿಕ್ರಿಯೆಗಳಿಗೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂದು ವಿವರಿಸಿದ್ದಾರೆ.
ಅಪಘಾತದ ಪರಿಣಾಮವಾಗಿ ಮೆದುಳಿನ ರಕ್ತನಾಳಗಳಿಗೆ ಹಾನಿಯಾಗಬಹುದು. ಇದನ್ನು ಸೆರೆಬ್ರೊವಾಸ್ಕುಲರ್ ಗಾಯ(Cerebrovascular Injury) ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮೆದುಳಿನ ಗಾಯಗಳು ಪುರುಷರ ಲೈಂಗಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಡಾ. ರೆಡ್ಡಿ ವಿವರಿಸಿದ್ದಾರೆ.
ಮೆದುಳಿಗೆ ಹಾನಿಯಾದ ಸಂದರ್ಭಗಳಲ್ಲಿ, ಪುರುಷರಲ್ಲಿ ಶಿಶ್ನದ ಪ್ರಚೋದನೆಯನ್ನು ತಿಳಿಸುವ ಮೆದುಳಿನ ಭಾಗವು ಹಾನಿಗೊಳಗಾಗುವುದರಿಂದ, ಆತ ತನ್ನ ಸಂಗಾತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಅಸಮರ್ಥನಾಗುತ್ತಾನೆ ಅಥವಾ ದುರ್ಬಲನಾಗುತ್ತಾನೆ. ಅಂತಹ ಪರಿಸ್ಥಿತಿಗಳಿಂದ ಚೇತರಿಸಿಕೊಳ್ಳುವುದು ಕಷ್ಟ. ಅಲ್ಲದೆ, ಒಬ್ಬ ವ್ಯಕ್ತಿಯು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಚಟುವಟಿಕೆಯನ್ನು ಮಾಡಲು ಅಸಮರ್ಥನಾದ್ರೆ, ಅದು ಆತನನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗುವಂತೆ ಮಾಡಬಹುದು.
ಲೈಂಗಿಕ ನಡವಳಿಕೆಯಲ್ಲಾಗುವ ಬದಲಾವಣೆಗಳೇನು?
ಅಪಘಾತ ಅಥವಾ ಅನಾರೋಗ್ಯದಿಂದಾಗಿ ಮೆದುಳಿಗಾಗುವ ಗಾಯವು, ಪುರುಷರ ಲೈಂಗಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಮ್ಮ ತಜ್ಞರು ವಿವರಿಸಿದ್ದಾರೆ.
- ಲೈಂಗಿಕ ಆಸಕ್ತಿಯ ನಷ್ಟ
ಯಾವುದೇ ಕಾರಣಗಳಿಂದಾಗುವ ಮೆದುಳಿನ ಗಾಯವು, ಪ್ರೀತಿ, ದೈಹಿಕ ಸಂಪರ್ಕ ಮತ್ತು ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸುವ ಮೆದುಳಿನ ಭಾಗದ ಮೇಲೆ ಪರಿಣಾಮ ಬೀರಿದ್ರೆ, ಆ ವ್ಯಕ್ತಿಯ ಲೈಂಗಿಕ ಪ್ರಚೋದನೆ ಅಥವಾ ಆಸಕ್ತಿ ಕಡಿಮೆಯಾಗುತ್ತದೆ.
- ದುರ್ಬಲತೆ ಮತ್ತು ಲೈಂಗಿಕ ಸುಖದ ಪರಾಕಾಷ್ಠೆ ಅನುಭವಿಸುವ ಅಸಮರ್ಥತೆ