ನವದೆಹಲಿ: ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ವಯಸ್ಕರಲ್ಲಿ ಅಸ್ತಮಾ ತೀವ್ರತೆ ಬಹುತೇಕ ದ್ವಿಗುಣಗೊಂಡಿದೆ ಎಂದು ವರದಿಯೊಂದು ತಿಳಿಸಿದೆ. ಥೋರಾಕ್ಸ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವು ಸಾಂಕ್ರಾಮಿಕ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಅಸ್ತಮಾ ದಾಳಿಯ ಅಪಾಯ ಹೆಚ್ಚಾಗಿದೆ ಎಂದು ಹೇಳಿದೆ. ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕಡಿಮೆ ಸಂಖ್ಯೆಯ ಜನ ಮಾಸ್ಕ್ ಬಳಸುತ್ತಿದ್ದಾರೆ ಮತ್ತು ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕೋವಿಡ್ -19 ಮತ್ತು ಇತರ ತೀವ್ರವಾದ ಉಸಿರಾಟದ ಸೋಂಕುಗಳ ಅಪಾಯ ಹೆಚ್ಚಾಗಿದೆ.
ಇತರ ಉಸಿರಾಟದ ಸೋಂಕುಗಳಿಗಿಂತ ಕೋವಿಡ್ -19 ಅಸ್ತಮಾ ದಾಳಿ ಉತ್ತೇಜಿಸುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ಕಂಡುಹಿಡಿದಿದೆ. ಕೋವಿಡ್-19 ನಿರ್ಬಂಧಗಳ ಸಡಿಲಿಕೆ ಮತ್ತು ತೀವ್ರವಾದ ಅಸ್ತಮಾ ದಾಳಿ ಎರಡೂ ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರೊಫೆಸರ್ ಆಡ್ರಿಯನ್ ಮಾರ್ಟಿನೌ ಹೇಳಿದರು.
ಕೋವಿಡ್ ಸಮಯದಲ್ಲಿ ಪರಿಚಯಿಸಲಾದ ಸಾರ್ವಜನಿಕ ಆರೋಗ್ಯ ಕ್ರಮಗಳ ಕೆಲ ಅಂಶಗಳಾದ ಮಾಸ್ಕ್ ಧರಿಸುವುದು ಹಾಗೂ ಇನ್ನೂ ಕೆಲ ಕ್ರಮಗಳು ಉಸಿರಾಟದ ಕಾಯಿಲೆ ಉಲ್ಬಣಿಸದಂತೆ ತಡೆಯುತ್ತವೆ ಎಂದು ಸಂಶೋಧನೆಯ ಪ್ರಮುಖ ಲೇಖಕ ಮತ್ತು ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ರೆಸ್ಪಿರೇಟರಿ ಇನ್ಫೆಕ್ಷನ್ ಆ್ಯಂಡ್ ಇಮ್ಯುನಿಟಿ ಕ್ಲಿನಿಕಲ್ ಪ್ರೊಫೆಸರ್ ಮಾರ್ಟಿನೌ ತಿಳಿಸಿದ್ದಾರೆ.