ಸಿಡ್ನಿ: ಪ್ರೀತಿ ಕುರುಡು ಎಂಬ ಮಾತು ಕೇಳಿದ್ದೇವೆ. ಲವ್ನಲ್ಲಿ ಬಿದ್ದವರಿಗೆ ತಮ್ಮ ಪ್ರೀತಿ ಹೊರತಾಗಿ ಯಾವುದೂ ಕಾಣುವುದಿಲ್ಲ. ತಮಗೆ ಪ್ರೀತಿಯೇ ಎಲ್ಲವೂ, ಅದುವೇ ಪ್ರಮುಖ ಎಂದು ಭಾವಿಸುತ್ತಾರೆ. ಇಂತಹ ಭಾವನೆ ಪ್ರೇಮಿಗಳಲ್ಲಿ ಮೂಡಲು ಕಾರಣವೇನು? ಈ ಪ್ರೀತಿ ಕುರುಡು ಎಂಬ ಕುರಿತು ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದಾರೆ. ಇದಕ್ಕಾಗಿ ಮಾನವನ ಮೆದುಳಿನ ವರ್ತನೆ ಸಕ್ರಿಯಗೊಳಿಸುವ ವ್ಯವಸ್ಥೆ (ಬಿಎಎಸ್) ಮತ್ತು ಪ್ರೀತಿಯ ನಡುವಿನ ಸಂಬಂಧವನ್ನು ಪರಿಶೀಲಿಸಿದ್ದಾರೆ.
ರೋಮ್ಯಾಂಟಿಕ್ ಲವ್ ಎಂಬುದು ನಮ್ಮ ಮೆದುಳನ್ನು ಬದಲಾಯಿಸುತ್ತದೆ. ವ್ಯಕ್ತಿಯೊಬ್ಬ ಪ್ರೀತಿಯಲ್ಲಿ ಬಿದ್ದಾಗ ಆತನಲ್ಲಿ ಲವ್ ಹಾರ್ಮೋನ್ ಎಂದು ಗುರುತಿಸಲಾದ ಆಕ್ಸಿಟೋಸಿನ್ ಬಿಡುಗಡೆಯಾಗುತ್ತೆ. ಇದು ಪ್ರೀತಿಯ ಭಾವನೆ ಅನುಭವಿಸುವಂತೆ ಮಾಡುತ್ತದೆ.
ಆಸ್ಟ್ರೇಲಿಯನ್ ನ್ಯಾಷನಲ್ ಯುನಿವರ್ಸಿಟಿ, ಕ್ಯಾನ್‌ಬೆರಾ ಯುನಿವರ್ಸಿಟಿ ಮತ್ತು ದಕ್ಷಿಣ ಆಸ್ಟ್ರೇಲಿಯಾ ಯುನಿವರ್ಸಿಟಿ ಸಂಶೋಧಕರು, ಹೇಗೆ ನಮ್ಮ ಪ್ರೀತಿಪಾತ್ರರು ಮೆದುಳಿನ ಒಂದು ಭಾಗವಾಗಲು ಕಾರಣ ಅನ್ನೋದರ ಕುರಿತು ಮಾಪನ ಮಾಡಿದ್ದಾರೆ.
ಈ ಅಧ್ಯಯನವನ್ನು ಜರ್ನಲ್ ಬಿಹೇವಿಯರಲ್ ಸೈನ್ಸ್ನಲ್ಲಿ ಪ್ರಕಟಿಸಲಾಗಿದ್ದು, ಇದಕ್ಕಾಗಿ 1,556 ಪ್ರೀತಿಯಲ್ಲಿದ್ದ ಯುವಜನರ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಸಮೀಕ್ಷೆಯಲ್ಲಿ ಭಾಗಿದಾರರು ತಮ್ಮ ಸಂಗಾತಿ ಬಗ್ಗೆ ಇದ್ದ ಭಾವನಾತ್ಮಕ ಪ್ರತಿಕ್ರಿಯೆಯನ್ನು ಮತ್ತು ಅದರ ಸುತ್ತಲಿನ ವರ್ತನೆ ಹಾಗೂ ಎಲ್ಲಕ್ಕಿಂತ ಹೆಚ್ಚಿನ ಮಟ್ಟದಲ್ಲಿ ತಮ್ಮ ಪ್ರೀತಿಯನ್ನು ಇರಿಸಿರುವ ಕುರಿತು ಗಮನ ಹರಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರೀತಿಯಲ್ಲಿದ್ದಾಗ ನಮ್ಮ ಮೆದುಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಅಲ್ಲದೆ, ನಮ್ಮ ಪ್ರೀತಿಯನ್ನು ಜೀವನದ ಕೇಂದ್ರವಾಗಿಸುತ್ತದೆ. ರೋಮ್ಯಾಂಟಿಕ್ ಲವ್ನ ವಿಕಸನದ ಬಗ್ಗೆ ನಮಗೆ ಸ್ವಲ್ಪವೇ ತಿಳಿದಿದೆ ಎಂದು ಎಎನ್ಯುನ ಪಿಎಚ್ಡಿ ವಿದ್ಯಾರ್ಥಿ ಮತ್ತು ಪ್ರಮುಖ ಸಂಶೋಧಕರಾಗಿರುವ ಆ್ಯಡಂ ಬೊಡೆ ತಿಳಿಸಿದ್ದಾರೆ.