ಹೈದರಾಬಾದ್: ಸಬ್ಬಕ್ಕಿ ಎಂಬುದು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬಹುತೇಕ ದೇಶಗಳ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅತ್ಯಂತ ಸಮೃದ್ಧ ಪೋಷಕಾಂಶ ಗುಣಹೊಂದಿರುವ ಈ ಪದಾರ್ಥವನ್ನು ಭಾರತದಲ್ಲಿ ಹೆಚ್ಚಾಗಿ ಸಿಹಿ ತಿನಿಸಿನಲ್ಲಿ ಕಾಣಬಹುದಾಗಿದೆ. ಪಾಯಸ, ವಡಾ, ಹಪ್ಪಳ ಸೇರಿದಂತೆ ಹಲವು ವಿಧದ ಆಹಾರವನ್ನು ಇದರಿಂದ ತಯಾರಿಸುತ್ತಾರೆ. ಇದು ದೇಹಕ್ಕೆ ಸಾಕಷ್ಟು ಶಕ್ತಿ ನೀಡುವ ಹಿನ್ನೆಲೆ ಉಪವಾಸದ ವ್ರತದ ಸಂದರ್ಭದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುವುದು. ಪೋಷಕಾಂಶ ಗುಣ ಹೊಂದಿರುವ ಈ ಸಬ್ಬಕ್ಕಿ ನಮ್ಮ ದೇಹಕ್ಕೆ ಯಾವ ರೀತಿ ಪ್ರಯೋಜನ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ಪ್ರೋಟಿನ್ ಆಗರ: ಸಸ್ಯಹಾರಿಗಳು ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟಿನ್ ಪಡೆಯುವಲ್ಲಿ ಕೆಲವೊಮ್ಮೆ ವಿಫಲರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಬ್ಬಕ್ಕಿ ಪ್ರಯೋಜನ ನೀಡಲಿದೆ. ಪ್ರತಿನಿತ್ಯದ ಡಯಟ್ನಲ್ಲಿ ಇದನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟಿನ್ ಜೊತೆಗೆ ಶಕ್ತಿ ಸಿಗುತ್ತದೆ. ಅಲ್ಲದೇ ಇದು ಸ್ನಾಯುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಮಲಬದ್ಧತೆ ನಿವಾರಣೆ: ಸಬ್ಬಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿದ್ದು, ಇದು ದಿನವಿಡಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಉಪವಾಸ ಸಮಯದಲ್ಲಿ ಇದು ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸಿ ದೇಹ ಚೈತನ್ಯದಿಂದ ಕೂಡಿರುವಂತೆ ಮಾಡುತ್ತದೆ. ಅಲ್ಲದೇ ಇದು ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆಗೂ ಪರಿಹಾರ ನೀಡಿ, ಮಲಬದ್ಧತೆ ನಿವಾರಣೆಗೆ ಸಹಕಾರಿಯಾಗಿದೆ.